ಗೋಕಾಕ:ಸಾಂಕ್ರಾಮಿಕ ರೋಗಗಳು ಹರಡದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಅನುಸರಿಸಬೇಕು : ಡಾ.ರಾಜೇಶ್ವರಿ ಹಿರೇಮಠ
ಸಾಂಕ್ರಾಮಿಕ ರೋಗಗಳು ಹರಡದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಅನುಸರಿಸಬೇಕು : ಡಾ.ರಾಜೇಶ್ವರಿ ಹಿರೇಮಠ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಅ 3 :
ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಿತ್ಯ ಆಗಾಗ ತುಂತುರ ಮಳೆ ಮತ್ತು ಹವಾಮಾನ ವೈಪರಿತ್ಯದಿಂದ ಡೆಂಘೆ ಮತ್ತು ಚಿಕೂನ್‍ಗುನ್ಯಾ ಹಾಗೂ ಸಾಂಕ್ರಾಮಿಕ ರೋಗಗಳು ಆವರಿಸುವ ಲಕ್ಷಣಗಳು ಕಾಣಿಸುತ್ತಿವೆ ಆದ್ದರಿಂದ ಗ್ರಾಮದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಎಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ತಿಳಿಸಿದ್ದಾರೆ.
ಶನಿವಾರ ಆ.3ರಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಥಳೀಯ ಸಾರ್ವಜನಿಕರು ತಮ್ಮ ಸುತ್ತಲಿನ ಪ್ರದೇಶ, ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುದ್ಧ ಕುಡಿಯುವ ನೀರು ಕಾಯಿಸಿ ಆರಿಸಿ ಕುಡಿಯಬೇಕು, ಮೂರು ದಿನಗಳ ತನಕ ನೀರು ಸಂಗ್ರಹಿಸಿ ಇಡಬಾರದು. ಮನೆಯಲ್ಲಿ ತಯಾರಿಸಿದ ಆಹಾರದ ಪಾತ್ರೆಗಳ ಮೇಲೆ ಮುಚ್ಚಬೇಕು, ಕೊಳಚೆ ನೀರು ಮನೆ ಸುತ್ತಲೂ ನಿಲ್ಲದಂತೆ, ಸೊಳ್ಳೆಗಳು ಉತ್ಪತಿಯಾಗದಂತೆ ಮುನ್ನಚ್ಛರಿಕೆ ವಹಿಸಿ, ಸೊಳ್ಳೆ ಪರದೆ ನಿತ್ಯ ರಾತ್ರಿ ಹೊತ್ತು ಬಳಸಬೇಕೆಂದು ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ಸಲಹೆ ನೀಡಿದ್ದಾರೆ.
ರೋಗ ಲಕ್ಷಣಗಳು: ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರಿತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವೀಪರಿತ ನೋವು ಕಾಣಿಸಿಕೊಳ್ಳುವದು, ಬಾಯಿ, ಮೂಗು, ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತ ಸ್ರಾವದ ಗುರುತು ಸೇರಿದಂತೆ ಇನ್ನೂ ಹಲವಾರು ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡರೆ ಡೆಂಘೀ, ಚಿಕ್ಯೂನ್ ಗುನ್ಯಾ ಮಾರಕ ರೋಗದ ಇಲ್ಲವೇ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಇರಬಹುದು ತಕ್ಷಣ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅವರನ್ನು ಭೇಟಿಯಾಗಿ ರೋಗ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಹಾಗೂ ರೋಗ ವಾಸಿಯಾಗುವ ಔಷಧೋಪಚಾರದ ಮಾಹಿತಿ, ಸಲಹೆಗಳನ್ನು ಸ್ಥಳೀಯರು ಪಡೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.
ಸ್ಥಳೀಯರಲ್ಲಿ ತಿಳುವಳಿಕೆ ಮೂಡಿಸಲು ಪ್ರಯತ್ನ: ತಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಹಾಗೂ ಡೆಂಘೀ, ಚಿಕ್ಯೂನ್ ಗುನ್ಯಾ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಸ್ಥಳೀಯರಲ್ಲಿ ತಿಳುವಳಿಕೆ ಮೂಡಿಸಲು ಸ್ಥಳೀಯ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಮೂಲಕ ಪ್ರಯತ್ನಿಸಲಾಗುವುದು ಎಂದು ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಿರೇಮಠ ತಿಳಿಸಿದ್ದಾರೆ.