ಗೋಕಾಕ:ಪ್ರವಾಹ ಭೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಾಲೂಕಾಡಳಿತಕ್ಕೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರವಾಹ ಭೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಾಲೂಕಾಡಳಿತಕ್ಕೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 4 :
ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗುವ ಸಂಭವವಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಹಾಗೂ ಮೂಡಲಗಿ ತಹಶೀಲ್ದಾರ ಅವರಿಗೆ ಸೂಚನೆ ನೀಡಿದ್ದಾರೆ.
ರವಿವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ದೂರವಾಣಿ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರವಾಹವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿಡಕಲ್ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಖಾನಾಪೂರ ಹಾಗೂ ಮಹಾರಾಷ್ಟ್ರದ ಭಾಗದಲ್ಲಿ ಎಡಬಿಡದೆ ಮಳೆ ಆಗುತ್ತಿರುವುದರಿಂದ ಘಟಪ್ರಭಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಘಟಪ್ರಭಾ ನದಿ ತೀರದ ಗ್ರಾಮಗಳಲ್ಲಿ ನೀರು ಪ್ರವೇಶಿಸುವ ಭೀತಿ ಇರುವುದರಿಂದ ತಾಲೂಕಾಡಳಿತವು ಜನ ಹಾಗೂ ಜಾನುವಾರುಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ನದಿ ತೀರದ ಗ್ರಾಮಗಳಾದ ಲೋಳಸೂರ, ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ, ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ, ಹುಣಶ್ಯಾಳ ಪಿಜಿ, ಫುಲಗಡ್ಡಿ, ಮಸಗುಪ್ಪಿ, ಪಟಗುಂದಿ, ಕಮಲದಿನ್ನಿ, ರಂಗಾಪೂರ, ಮುನ್ಯಾಳ, ಗ್ರಾಮಗಳಲ್ಲಿ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶದ ನೋಡಲ್ ಅಧಿಕಾರಿಗಳು ಸ್ಥಳದಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓ, ಕಂದಾಯ ನಿರೀಕ್ಷಕರು, ದಿನದ 24 ಗಂಟೆಗಳ ಕಾಲ ಕರ್ತವ್ಯ ಸೂಚಿಸಿದ ಸ್ಥಳದಲ್ಲಿ ಕಾರ್ಯನಿರ್ವಹಿಸಿ ಯಾವುದೇ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಗತ್ಯತೆಗನುಗುಣವಾಗಿ ಸಾರ್ವಜನಿಕರಿಗೆ ಗಂಜಿ ಕೇಂದ್ರಗಳನ್ನು ಆರಂಭಿಸುವಂತೆ ಸೂಚನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ನದಿಯ ಹಿನ್ನೀರಿನ ಪ್ರಯುಕ್ತ ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಬೋಟಿನ ವ್ಯವಸ್ಥೆ ಮಾಡಬೇಕು. ಮುಳುಗಡೆಯಾಗುವ ಮುನ್ಸೂಚನೆ ಇರುವ ಸ್ಥಳಗಳಿಗೆ ಕೂಡಲೇ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ಸೂಚನೆ ನೀಡಿದರು. ಎಲ್ಲ ಜನಪ್ರತಿನಿಧಿಗಳು ಸಹ ಅಧಿಕಾರಿಗಳ ಜೊತೆಗೂಡಿ ಸಹಕಾರ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಮಳೆಯಿಂದಾಗಿ ಶಿಥಿಲಗೊಂಡ ಶಾಲಾ ಕೊಠಡಿಗಳ ದುರಸ್ತಿಗಾಗಿ ನೈಸರ್ಗಿಕ ವಿಕೋಪ ಪರಿಹಾರ ನಿಧಿ ಪ್ರಸ್ತಾವಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸುವಂತೆ ಸೂಚನೆ ನೀಡಿದರು. ನದಿ ದಡದಲ್ಲಿ ಪ್ರವಾಹ ಭಾಗದಲ್ಲಿ ವಿದ್ಯುತ್‍ನಿಂದ ಯಾವುದೇ ಅವಘಡ ಸಂಭವಿಸದಂತೆ ಹೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕು. ಜೊತೆಗೆ ಸೂಕ್ತ ಬಂದೋಬಸ್ತಗಾಗಿ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಲೋಳಸೂರ ಬ್ರಿಡ್ಜ್ ಮೇಲೆ ಭಾರೀ ಗಾತ್ರದ ವಾಹನಗಳ ಸಂಚಾರವನ್ನು ನಿಯಂತ್ರಿಸಬೇಕು. ಒಟ್ಟಿನಲ್ಲಿ ಪ್ರವಾಹವನ್ನು ಎದುರಿಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಾಲೂಕಾಡಳಿತಕ್ಕೆ ತಾಕೀತು ಮಾಡಿದರು.
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಮುರಳೀಧರ ತಳ್ಳಿಕೇರಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಹೆಸ್ಕಾಂ ಎಇಇ ನಾಗನ್ನವರ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ, ಉಪತಹಶೀಲ್ದಾರರಾದ ಲಕ್ಷ್ಮಣ ಭೋವಿ, ಎಂ.ಐ. ಹಿರೇಮಠ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಈಗಾಗಲೇ ಹಿಡಕಲ್ ಜಲಾಶಯದಲ್ಲಿ 42.08 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳಹರಿವು 50000 ಕ್ಯೂಸೆಕ್ಸ್ ಇರುವುದರಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಂಭವ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.