RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಕರದಂಟು ನಾಡಿನಲ್ಲಿ ಜಲಪ್ರಳಯ : ‌ಸೇತುವೆಗಳು ಜಲಾವೃತ್ತ – ಸಂರ್ಪಕ ಕಡಿತ

ಗೋಕಾಕ:ಕರದಂಟು ನಾಡಿನಲ್ಲಿ ಜಲಪ್ರಳಯ : ‌ಸೇತುವೆಗಳು ಜಲಾವೃತ್ತ – ಸಂರ್ಪಕ ಕಡಿತ 

ಕರದಂಟು ನಾಡಿನಲ್ಲಿ ಜಲಪ್ರಳಯ : ‌ಸೇತುವೆಗಳು ಜಲಾವೃತ್ತ – ಸಂರ್ಪಕ ಕಡಿತ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 7 :

 

 

ಕಳೆದ 5-6 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಹಿಡಕಲ್ಲ ಜಲಾಶಯದಿಂದ ಬಿಡುತ್ತಿರುವ ನೀರಿನಿಂದಾಗಿ ನಗರದ ಎಲ್ಲ ಕಡೆಯ ರಸ್ತೆಗಳು ಬಂದಾಗಿದ್ದರಿಂದ ಸಂಪೂರ್ಣ ಸಂಪರ್ಕ ಕಡಿತವಾಗಿ ನಡುಗಡ್ಡೆಯಾಗಿ ಪರಿಣಮಿಸಿದೆ.
ಕ್ಷಣಕ್ಷಣಕ್ಕೂ ನದಿ ನೀರು ಹೆಚ್ಚಾಗುತ್ತಿದ್ದು ಮಳೆರಾಯನ ಅಟ್ಟಹಾಸ ಹೆಚ್ಚಾಗಿದೆ, ನಗರದ ಅನೇಕ ಕಡೆಗೆ ನೀರು ನುಗ್ಗುತ್ತಿದೆ. ಲೋಳಸೂರ ಹಾಗೂ ಮಾರ್ಕಂಡೇ ಸೇತುವೆ ಸಂಪೂರ್ಣ ಜಲಾವೃತಗೊಂಡಿವೆ. ಎಪಿಎಮ್‍ಸಿ ರಸ್ತೆಗೂ ಕೂಡಾ ನೀರು ಬಂದಿದೆ. ಜ್ಞಾನಮಂದಿರ ರಸ್ತೆಯಲ್ಲಿ ಸಹ ಮಾರ್ಕಂಡೇ ನದಿ ನೀರು ಬಂದಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.


  • ಬುಧವಾರದಂದು ಮುಂದುವರೆದ ಭಾಗವಾಗಿ ಗುರುವಾರ ಪೇಠ, ವಡ್ಡರ ಗಲ್ಲಿ, ವಾಲ್ಮೀಕಿ ವೃತ್ತ, ನಾಕಾ ನಂ1 ಅಡಿಬಟ್ಟಿ ಬಡಾವಣೆ, ಎಪಿಎಮ್‍ಸಿ ರಸ್ತೆ, ಎನ್‍ಎಸ್‍ಎಫ್ ಶಾಲೆ ಆವರಣ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅತಿಥಿ ಗೃಹ, ಪುಂಡಿಕೇರಿ ಗಲ್ಲಿ, ಬಣಗಾರ ಗಲ್ಲಿ, ವಾಲ್ಮೀಕಿ ವೃತ್ತ, ಮಾರ್ಕಂಡೇಯ ನಗರದ ಮನೆಗಳಿಗೆ ನದಿ ನೀರು ನುಗ್ಗಿದೆ. ಹೀಗಾಗಿ ಆಶ್ರಯ ಹುಡುಕುತ್ತ ಜನರು ಓಡಾಡುತ್ತಿದ್ದಾರೆ. 500ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಮನೆನೀರು ಕಡಿಮೆಯಾದ ನಂತರ ನಷ್ಟದ ಅಂದಾಜು ಮಾಡಬಹುದಾಗಿದೆ.
    ಗುರುವಾರ ಪೇಠೆಯ ಲಕ್ಮೀದೇವಿ ದೇವಸ್ಥಾನದ ಹತ್ತಿರವಿರುವ ಮನೆಯಲ್ಲಿ ಸಿಲುಕಿದ 30ಕ್ಕೂ ಹೆಚ್ಚು ಜನರನ್ನು ಅಯ್ಯುಬ ಖಾನ ಅವರ ತಂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ನಂತರ ನಗರದ ಹೊರವಲಯದಲ್ಲಿರುವ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ದೇವಸ್ಥಾನ ಹತ್ತಿರವಿರುವ ಹೆಜ್ಜೆಗಾರ ಅವರ ತೋಟದ(ನಡುಗಡ್ಡೆ) ಸಿಲುಕಿರುವ ಯುವಕ ಮಾಧವಾನಂದ(ನಂದು) ದೊಡಮನಿ(23) ಆತನನ್ನು ಹೊರ ತರಲು ಅಯ್ಯುಬ ಖಾನ ಅವರ ತಂಡ ತೆರಳಿದಾಗ ಅಲ್ಲಿಯ ಪ್ರವಾಹದ ಆರ್ಭಟದ ಸೆಳೆವುನ್ನು ಕಂಡು ನಿಸ್ಸಹಾಯಕರಾದರು. ಯುವಕನ್ನು ರಕ್ಷಿಸಲು ಮೋಟಾರ ಚಾಲಿತ ಬೋಟ್‍ನ ಅವಶ್ಯಕತೆ ಇದೆ ಎಂದು ಪತ್ರಿಕೆ ತಿಳಿಸಿದರು. ಯುವಕನ ರಕ್ಷಣೆಗಾಗಿ ಸಂಬಂಧಿಕರು ತಹಶೀಲದಾರ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಯಾವುದೇ ಪ್ರಯೋಜನೆಯಾಗಿರುವದಿಲ್ಲ. ಗೋಕಾಕ ನಗರದಲ್ಲಿ ಒಂದೂ ಯಂತ್ರ ಚಾಲಿತ ಬೋಟ ಇಲ್ಲದೆ ಇರುವದು ಅತ್ಯಂತ ಶೋಚನೀಯವಾಗಿದೆ.

ರೋಗಿಗಳನ್ನು ಕಾಡಿದ ಪ್ರವಾಹ: ನಗರದ ನಿಮ್ರಾ ಆಸ್ಪತ್ರೆ ಹಾಗೂ ಡಾ. ಅಶೋಕ ಕೊಪ್ಪ ಆಸ್ಪತ್ರೆಯಲ್ಲಿ ವೈದ್ಯರು, ರೋಗಿಗಳು ಹಾಗೂ ಸಿಬ್ಬಂದಿ ಸಮೇತ 27 ಜನರನ್ನು ಅಯ್ಯೂಬ ಖಾನ (ಎಕ್ಸ್‍ಫ್ಲೋರ್ ದಿ ಔಡ್ಡೋರ್) ತಂಡ ತಮ್ಮ ಬೋಟಗಳ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಅಲ್ಲದೇ ಡಾ|| ಕಡಾಡಿಯವರ ಆರೋಗ್ಯ ಆಧಾರ ಹಾಸ್ಪಿಟಲ್, ಮಾಸೂರಕರ ಆಸ್ಪತ್ರೆಯಲ್ಲಿ ರೋಗಿಗಳನ್ನು ಸ್ಥಳಾಂತರಿಸುವ ಕಾರ್ಯ ಎಂತವರ ಮನವನ್ನು ಕಲುಕುವಂತಿತ್ತು.

ಯುವತಿ ಸಾವು: ನದಿ ಪಕ್ಕದ ಲೋಳಸೂರ ಗ್ರಾಮದಲ್ಲಿ ಪ್ರವಾಹದಿಂದಾಗಿ ಓರ್ವರ ಮನೆ ಬೀಳಿವ ಸ್ಥಿತಿಯಲ್ಲಿ ಇದ್ದಾಗ ಮನೆಯ ಸಾಮಾನು ಹೊರೆಗೆ ಸಾಗಿಸುವಾಗ ಮಳೆಯಲ್ಲಿ ನೆನೆದಿದ್ದರಿಂದ ಪದ್ಮಾವತಿ ಪಾಟೀಲ ಎಂಬ 21 ವರ್ಷದ ಯುವತಿ ತೀವ್ರ ಜ್ವರಕ್ಕೆ ತುತ್ತಾಗಿದ್ದಳು. ಪ್ರಥಮೋಪಚಾರ ನೀಡಿದ್ದರೂ ಬುಧವಾರದಂದು ಬೆಳಿಗ್ಗೆ ನಿಧನಳಾಗಿದ್ದಾಳೆ.

ಅಘೋಷಿತ ಬಂದ್: ಕಳೆದ ಎರಡು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಮತ್ತು ಸಂಚಾರ ವ್ಯವಸ್ಥೆ ಬಂದಾಗಿದ್ದರಿಂದ ನಗರದಲ್ಲಿಯ ಬಹುತೇಕ ಬೀದಿಗಳು ಬೀಕೋ ಎನ್ನುತ್ತಿದ್ದು ಅಘೋಷಿತ ಬಂದ್ ಆದಂತಾಗಿದೆ. ನೂರಕ್ಕೆ ಶೇ.80ರಷ್ಟು ಅಂಗಡಿಗಳು ಗ್ರಾಹಕರು ಇಲ್ಲವಾಗಿದ್ದರಿಂದ ಬಂದಾಗಿವೆ. ಕಾಯಿಪಲ್ಲೆ ಹಾಗೂ ಹಾಲು ಕೂಡಾ ಸಿಗುತ್ತಿಲ್ಲ. ನಗರಕ್ಕೆ ಮೂರು ಕಡೆಯಿಂದ ಜಲ ದಿಗ್ಬಂಧನವಾಗಿದ್ದು ಬಹುತೇಕ ಸಂಪೂರ್ಣವಾಗಿ ಸಂಚಾರ ಸ್ಥಗಿತವಾದಂತದಾಗಿದೆ. ಪೇಟ್ರೋಲ್, ಡಿಸೇಲ್ ಪಂಪಗಳಲ್ಲಿ ಇಂಧನವಿಲ್ಲದೇ ಅಧಿಕಾರಿಗಳ ಸೇರಿದಂತೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇದರಿಂದ ಜನರು ಹೌಹಾರಿ ಹೋಗಿದ್ದಾರೆ.
ಸುಮಾರು ಏಳೆಂಟು ವರ್ಷಗಳ ಹಿಂದೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದ ಭವಿಷ್ಯ ಇಂದು ಸತ್ಯವಾಗಿ ಪರಿಣಮಿಸಿದೆ.
ಸತೀಶ ಜಾರಕಿಹೊಳಿ ಅವರು ಲೋಳಸೂರ ಸೇತುವೆ ಬಳಿ ಸಂಕೇಶ್ವರ-ನರಗುಂದ ರಸ್ತೆ ನಿರ್ಮಾಣದ ವೇಳೆಯಲ್ಲಿ ರಸ್ತೆ ಎತ್ತರಿಸುವ ಕ್ರಮ ಅವೈಜ್ಞಾನಿಕವಾಗಿದ್ದರಿಂದ ಘಟಪ್ರಭಾ ನದಿ ನೀರು ನಗರಕ್ಕೆ ದೊಡ್ಡ ಪ್ರಮಾಣದಲ್ಲಿ ನುಗ್ಗುವ ಭೀತಿ ವ್ಯಕ್ತ ಪಡಿಸಿ ಎಚ್ಚರಿಸಿದ್ದರು. ಅದು ಇಂದು ಸತ್ಯವಾಗಿದ್ದು ಇದರಿಂದ ನದಿ ನೀರು ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ನುಗ್ಗಿದ್ದು ನದಿ ನೀರು ಇನ್ನು ಹೆಚ್ಚುತ್ತಲೇ ನಡೆದಿದೆ. ನಗರದ ಸುತ್ತುಮುತ್ತಲಿನ ರಸ್ತೆಗಳು ಬಂದಾಗಿದ್ದು ಇಡೀ ನಗರ ನಡುಗಡ್ಡೆಯಂತಾಗಿದೆ.

Related posts: