ಗೋಕಾಕ:2018 ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಿ : ಮಾಜಿ ಸಚಿವ ಬಾಲಚಂದ್ರ
2018 ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಿ : ಮಾಜಿ ಸಚಿವ ಬಾಲಚಂದ್ರ
ಗೋಕಾಕ ಜು 16 : 2018 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು. ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಲೋಳಸೂರ ಗ್ರಾಮದಲ್ಲಿ ರವಿವಾರದಂದು ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡ ಸ್ವಚ್ಛ ಭಾರತ ಅಭಿಯಾನ, ಸಸಿ ನೆಡುವ ಹಾಗೂ ಬೂಥ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಜನಪ್ರೀಯ ಯೋಜನೆಗಳನ್ನು ಪ್ರತಿ ಮನೆ-ಮನೆಗೆ ತಲುಪಿಸುವ ಕೆಲಸ ನಡೆಯಬೇಕು. ಈಗ ನಡೆಯುತ್ತಿರುವ ವಿಸ್ತಾರಕರ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಮಾದರಿ ಮಾಡುವ ಸಂಕಲ್ಪ ಕಾರ್ಯಕರ್ತರು ತೊಡಬೇಕು. ಅರಭಾವಿ ಮಂಡಲ ಈಗಾಗಲೇ ಸದಸ್ಯತ್ವ ಅಭಿಯಾನದಲ್ಲಿ ಅತೀ ಹೆಚ್ಚು ಸದಸ್ಯರನ್ನು ನೋಂದಣಿ ಮಾಡುವ ಮೂಲಕ ಅಗ್ರ ಸ್ಥಾನ ಪಡೆದಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು ಹಗಲಿರುಳು ದುಡಿಯಬೇಕು. ಸಂಘಟನೆಗೆ ಹೊಸ ರೂಪ ಕೊಡಬೇಕು. ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷ ಅಧಿಕಾರಕ್ಕೆ ಬರಲು ಕಾರಣೀಕರ್ತರಾಗಬೇಕೆಂದು ಅವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಸರ್ವಾಂಗೀಣ ಪ್ರಗತಿಗಾಗಿ ದುಡಿಯುತ್ತಿದ್ದಾರೆ. ಬಡವರು, ರೈತರು, ಶೋಷಿತರು, ಮಹಿಳೆಯರ ವಿಕಾಸಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಭಾರತ ದೇಶ ಎಲ್ಲದರಲ್ಲೂ ಮುಂದೆಬರಲು ಅವರ ಕೊಡುಗೆ ಅಪಾರವಾಗಿದೆ. ಇಡೀ ಜಗತ್ತೇ ಭಾರತದತ್ತ ನೋಡುತ್ತಿರುವುದು ಪ್ರಧಾನಿಯವರ ದೂರದೃಷ್ಟಿ ಕಾರಣ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಶೇ 4.5 ರಷ್ಟು ದೇಶದ ಸರಾಸರಿ ಅಭಿವೃದ್ಧಿಯಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಶೇ 7.7 ರಷ್ಟು ದೇಶದ ಸರಾಸರಿ ಅಭಿವೃದ್ಧಿಯಾಗಿದೆ. ಚೀನಾ ದೇಶಕ್ಕಿಂತಲೂ ಅಭಿವೃದ್ಧಿಯಲ್ಲಿ ಭಾರತ ಮುಂದಿದೆ. ಇದಕ್ಕೆ ಪ್ರಧಾನಿಯವರು ಹಮ್ಮಿಕೊಂಡಿರುವ ಜನಪರ ಹಾಗೂ ರೈತಪರ ಯೋಜನೆಗಳೇ ಸಾಕ್ಷಿಯಾಗಿವೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ ಮಾತನಾಡಿ, ರಾಜ್ಯಾದ್ಯಂತ 40 ಸಾವಿರ ಕಾರ್ಯಕರ್ತರು ತಮ್ಮ ಮನೆಗಳನ್ನು ಬಿಟ್ಟು ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಲು ಪ್ರವಾಸ ಮಾಡುತ್ತಿದ್ದಾರೆ. ಸುಮಾರು 15 ದಿನಗಳವರೆಗೆ ರಾಜ್ಯಾದ್ಯಂತ ವಿಸ್ತಾರಕರ ಸಭೆಗಳು ನಡೆಯುತ್ತಿವೆ. ವಿಸ್ತಾರಕರ ಯೋಜನೆಯಿಂದ ಜನರ ಸಮಸ್ಯೆಗಳು ನಮ್ಮ ಗಮನಕ್ಕೆ ಬರುತ್ತವೆ. ಅಂತಹ ಸಮಸ್ಯೆಗಳನ್ನು ನಾವು ನಮ್ಮ ನಾಯಕರ ಮುಂದೆ ಹೇಳಿ ಅವುಗಳಿಗೆ ಪರಿಹಾರ ಕಲ್ಪಿಸಿಕೊಡುತ್ತೇವೆ. ಅರಭಾವಿ ಮತಕ್ಷೇತ್ರವು ಸದಸ್ಯತ್ವ ಅಭಿಯಾನದಲ್ಲಿ ಅತೀ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿ ಅತ್ಯುತ್ತಮ ಸಾಧನೆ ಮಾಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೂಳಪ್ಪ ಹೊಸಮನಿ, ಅರಭಾವಿ ಮಂಡಲ ವಿಸ್ತಾರಕ ರಾಜು ಮಗಿಮಠ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಲೋಳಸೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಿದ್ದವ್ವ ನಿಡಗುಂದಿ, ಉಪಾಧ್ಯಕ್ಷ ಯಮನಪ್ಪ ಬಾಗಾಯಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ, ಮುಖಂಡರಾದ ಪ್ರಕಾಶ ಮೇಟಿ, ಮನೋಹರ ಗಡಾದ, ಮೂಡಲಗಿ ಪುರಸಭೆ ಉಪಾಧ್ಯಕ್ಷ ರವಿ ಸೋನವಾಲ್ಕರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಗ್ರಾಮ ಪಂಚಾಯತಿ ಸದಸ್ಯರು, ಅರಭಾವಿ ಮಂಡಲದ ಎಲ್ಲ ಶಕ್ತಿ ಕೇಂದ್ರಗಳ ವಿಸ್ತಾರಕರು ಹಾಗೂ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.