RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ತಾತ್ಕಾಲಿಕವಾಗಿ ಸಂತ್ರಸ್ಥರಿಗೆ 15 ಕೋಟಿ ರೂ. ವೆಚ್ಚದಲ್ಲಿ ಶೆಡ್‍ಗಳನ್ನು ನಿರ್ಮಿಸಿಕೊಡಲಾಗುವದು : ಶಾಸಕ ಬಾಲಚಂದ್ರ

ಗೋಕಾಕ:ತಾತ್ಕಾಲಿಕವಾಗಿ ಸಂತ್ರಸ್ಥರಿಗೆ 15 ಕೋಟಿ ರೂ. ವೆಚ್ಚದಲ್ಲಿ ಶೆಡ್‍ಗಳನ್ನು ನಿರ್ಮಿಸಿಕೊಡಲಾಗುವದು : ಶಾಸಕ ಬಾಲಚಂದ್ರ 

ತಾತ್ಕಾಲಿಕವಾಗಿ ಸಂತ್ರಸ್ಥರಿಗೆ 15 ಕೋಟಿ ರೂ. ವೆಚ್ಚದಲ್ಲಿ ಶೆಡ್‍ಗಳನ್ನು ನಿರ್ಮಿಸಿಕೊಡಲಾಗುವದು : ಶಾಸಕ ಬಾಲಚಂದ್ರ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 11 :

 

 

 

ವರುಣನ ಅರ್ಭಟಕ್ಕೆ ನಲುಗಿ ನದಿ ತೀರದ ಗ್ರಾಮಗಳ ಅಂದಾಜು 5 ಸಾವಿರಕ್ಕೂ ಅಧಿಕ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇನ್ನೂ ಮನೆಗಳ ಸಂಖ್ಯೆ ಹೆಚ್ಚಾಗಬಹುದು. ಈ ಕೂಡಲೇ ಸಂತ್ರಸ್ಥರಿಗೆ ವಾಸಿಸಲು ಸೂರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಭಾನುವಾರದಂದು ಹೊಸಪೇಠ ಗಲ್ಲಿಯಲ್ಲಿರುವ ತಮ್ಮ ಕಾರ್ಯಾಲಯದಲ್ಲಿ ಸ್ವಾಭಿಮಾನಿ ಬಿ. ಶ್ರೀರಾಮುಲು ಬ್ರಿಗೇಡ್, ಕಿಚ್ಚ ಸುದೀಪ ಅಭಿಮಾನಿ ಬಳಗದವರು ನೆರೆ ಸಂತ್ರಸ್ಥರಿಗೆ ಊಟೋಪಚಾರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಒಂದು ವೇಳೆ ಸರ್ಕಾರದ ಪರಿಹಾರ ಕಾರ್ಯ ವಿಳಂಬವಾದರೇ ತಾತ್ಕಾಲಿಕವಾಗಿ ಸಂತ್ರಸ್ಥರಿಗೆ 15 ಕೋಟಿ ರೂ. ವೆಚ್ಚದಲ್ಲಿ 400 ಚದರ ಮೀಟರ ಅಳತೆಯ 5 ಸಾವಿರ ಶೆಡ್‍ಗಳನ್ನು ತಮ್ಮ ಸ್ನೇಹಿತರ ಸಹಕಾರದಿಂದ ನಿರ್ಮಿಸಿಕೊಡಲಾಗುವುದು. ಸಂತ್ರಸ್ಥರು ಯಾವ ಕಾರಣಕ್ಕೂ ಹೆದರಬಾರದು ಎಂದು ಹೇಳಿದರು.
ಹಿಂದೆಂದೂ ಕಂಡರಿಯದ ಜಲ ಪ್ರಳಯ ನಮ್ಮ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಿಗೂ ಬಂದಿದ್ದು, ಇಷ್ಟೊಂದು ಹಾನಿಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಘಟಪ್ರಭಾ ನದಿಯಿಂದ ಹರಿದ ಕುಂಭದ್ರೋಣ ಮಳೆಯಿಂದಾಗಿ ಸಂತ್ರಸ್ಥರು ಮನೆಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ಥರು ಹೆದರಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಮಾಡಿದರೇ ಸ್ವತಃ ನಾನೇ ಹೇಗಾದರೂ ಮಾಡಿ ಹಣದ ವ್ಯವಸ್ಥೆ ಮಾಡುತ್ತೇನೆಂದು ಹೇಳಿದರು.
ಈಗಾಗಲೇ ಕ್ಷೇತ್ರದ ನದಿ ತೀರದ 29 ಗ್ರಾಮಗಳು ಪ್ರವಾಹದಿಂದಾಗಿ ಜಲಾವೃತಗೊಂಡಿವೆ. 2 ಸಾವಿರ ಕೋಟಿ ರೂ. ಅಂದಾಜು ನಷ್ಟವಾಗಿದೆ. ತೊಟ್ಟ ಅರಿವೆ ಮೇಲೆ ಸಂತ್ರಸ್ಥರು ಗಂಜಿ ಕೇಂದ್ರಗಳಲ್ಲಿ ವಾಸವಿದ್ದಾರೆ. ಇದನ್ನು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ದೂರವಾಣಿ ಮೂಲಕ ಸಮಗ್ರ ಮಾಹಿತಿ ನೀಡಿದ್ದೇನೆ. ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂತ್ರಸ್ಥರಿಗೆ ಸೂರು ಸೇರಿದಂತೆ ಎಲ್ಲ ವ್ಯವಸ್ಥೆ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಸರ್ಕಾರ ಎಂದ ಮೇಲೆ ಪರಿಹಾರ ನೀಡುವ ಕಾರ್ಯ ವಿಳಂಬವಾಗಬಹುದು. ನಾನೇ ಸ್ವತಃ ಮುಂದೆ ನಿಂತು ಸಂತ್ರಸ್ಥರ ಬೇಕು ಬೇಡಗಳಿಗೆ ಹೆಗಲು ಕೊಟ್ಟು ದುಡಿಯುತ್ತೇನೆ. ಈಗಾಗಲೇ ಗಂಜಿ ಕೇಂದ್ರಗಳಲ್ಲಿ ಸಂತ್ರಸ್ಥರಿಗೆ ಉಪಹಾರ, ಊಟ ಹಾಗೂ ವಸತಿ ಸೌಲಭ್ಯವನ್ನು ಮಾಡಲಾಗಿದೆ. ನಮ್ಮ ಅಧಿಕಾರಿಗಳು, ಟೀಂ ಎನ್‍ಎಸ್‍ಎಫ್, ಜನಪ್ರತಿನಿಧಿಗಳು ಸೇರಿದಂತೆ ಹಲವರು ಸಂತ್ರಸ್ಥರನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ನೆರೆ ಪೀಡಿತರಿಗೆ ಊಟ, ಹೊದಿಕೆ, ಬಟ್ಟೆ, ನೀರು ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲು ಆಗಮಿಸುತ್ತಿದ್ದಾರೆ. ಇಂತಹ ಕಾರ್ಯ ಅಭಿನಂದನಾರ್ಹವಾಗಿದೆ. ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿರುವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕೋಲಾರದ ಸ್ವಾಭಿಮಾನಿ ಬಿ. ಶ್ರೀರಾಮುಲು ಬ್ರಿಗೇಡ್, ಬೆಳಗಾವಿಯ ಕಿಚ್ಚ ಸುದೀಪ ಅಭಿಮಾನಿ ಬಳಗ, ನೆಲಮಂಗಲದ ನಾಗರಾಜ್ ತಂಡಗಳು ತಪಸಿ ಕ್ರಾಸ್, ತಳಕಟ್ನಾಳ, ತಿಗಡಿ, ಬೆಟಗೇರಿ ಗಂಜಿ ಕೇಂದ್ರಗಳಲ್ಲಿ ಊಟೋಪಚಾರ ವ್ಯವಸ್ಥೆ ಮಾಡುತ್ತಿವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ನಮ್ಮ ಸಂತ್ರಸ್ಥರಿಗೆ ಸಾಂತ್ವನ ಹೇಳಿ ನೆರವು ನೀಡುತ್ತಿರುವ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳ ಕಾಳಜಿಯನ್ನು ಶ್ಲಾಘಿಸಿದರು.
ಆದಿಚುಂಚನಗಿರಿ ಮಠದಿಂದ ನೆರವು : ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಟ್ರಸ್ಟಿನವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಸಂತ್ರಸ್ಥರ ನೆರವಿಗೆ ನಾವು ಸಿದ್ಧರಿದ್ದೇವೆ. ನಮಗೆ ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಮಠದ ಸಿಇಓ ರಾಮಲಿಂಗೇಗೌಡ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ), ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ರಾಜೇಸಾಬ ಅಂಡಗಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts: