ಗೋಕಾಕ:ವಿಡಿಯೋ ವೈರಲ್ ಹಿಂದೆ ರಾಜಕೀಯ ಷಡ್ಯಂತ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ
ವಿಡಿಯೋ ವೈರಲ್ ಹಿಂದೆ ರಾಜಕೀಯ ಷಡ್ಯಂತ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 13 :
ಸಂತ್ರಸ್ಥರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರ್ಕಾರ ಕೆಡವಿ ಬಿಡುತ್ತೇನೆ ಎಂಬ ಹೇಳಿಕೆಯು ಬಾಯ್ತಪ್ಪಿನಿಂದ ಬಂದಿದೆ ವಿನಃ ಇದರಲ್ಲಿ ಯಾವುದೇ ದುರುದ್ಧೇಶವಿಲ್ಲ ಎಂದು ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿ ಮಂಗಳವಾರದಂದು ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಿನ್ನೆ ಸೋಮವಾರ ಸಂಜೆ ತಿಗಡಿ ಗ್ರಾಮದಲ್ಲಿ ಸಂತ್ರಸ್ಥರ ಕಷ್ಟ-ಕಾರ್ಪಣ್ಯಗಳನ್ನು ವಿಚಾರಿಸುತ್ತಿರುವಾಗ ಕೆಲವರು ನಮಗೆ ಮನೆ ಕಟ್ಟಿಸಿಕೊಡಿ. ಇಲ್ಲದಿದ್ದರೆ ಸರ್ಕಾರ ಕೆಡವಿ ಎಂದು ಹೇಳಿದಾಗ, ಅವರನ್ನು ಸಮಾಧಾನಪಡಿಸಲು ಸರ್ಕಾರ ನಿಮ್ಮ ಕೈಬಿಡುವುದಿಲ್ಲ. ಹೇಳುವ ಬದಲು ಬಾಯ್ತಪ್ಪಿನಿಂದ ಇಂತಹ ಹೇಳಿಕೆ ಬಂದಿದೆ. ಯಾರೂ ಅನ್ಯಥಾ ಭಾವಿಸಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಉತ್ತರ ಕರ್ನಾಟಕ ಜಲ ಪ್ರವಾಹದಿಂದ ನಲುಗಿ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿಯುಂಟಾಗಿದೆ. ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಮರ್ಥವಾಗಿ ನೆರೆ ಪ್ರವಾಹವನ್ನು ಎದುರಿಸುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಭೇಟಿ ನೀಡಿ ನೆರೆ ಪೀಡಿತರನ್ನು ಸಾಂತ್ವನ ಸೂಚಿಸುತ್ತಿದ್ದಾರೆ. ಅಲ್ಲದೇ ಪರಿಹಾರವನ್ನು ಕೂಡ ಘೋಷಣೆ ಮಾಡಿದ್ದಾರೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ನೆರೆ ಪೀಡಿತರಿಗೆ ಸರ್ಕಾರದಿಂದ ಪರಿಹಾರ ಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಕೂಡ ನಮ್ಮ ಬೆನ್ನಿಗೆ ಇರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ನನಗೆ ಎಲ್ಲವನ್ನು ನೀಡಿರುವಾಗ ನಾನೇಕೆ ಸರ್ಕಾರದ ವಿರುದ್ಧ ಮಾತನಾಡಲೀ. ಕೆಲ ವಿರೋಧಿಗಳು ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಹಿಂದೆ ರಾಜಕೀಯ ಷಢ್ಯಂತ್ರ ಅಡಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ಈ ಕುರಿತಂತೆ ತಮ್ಮ ಸ್ಪಷ್ಟನೆ ನೀಡಿದ್ದಾರೆ.