ಬೆಳಗಾವಿ:ಗೋಕಾಕ್ ನ ವ್ಯವಸ್ಥೆ ಬದಲಾವಣೆ ಆಗಬೇಕೆಂದರೆ ಶಾಸಕ ಬದಲಾವಣೆ ಆಗಬೇಕು : ಸತೀಶ ಜಾರಕಿಹೊಳಿ
ಗೋಕಾಕ್ ನ ವ್ಯವಸ್ಥೆ ಬದಲಾವಣೆ ಆಗಬೇಕೆಂದರೆ ಶಾಸಕ ಬದಲಾವಣೆ ಆಗಬೇಕು : ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಅ 18 :
ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮುಂದೆ ಮತ್ತೆ ಕಾಂಗ್ರೆಸ್ ಗೆ ಮರಳುತ್ತಾರೆ. ಅವರಿಗೆ ದುಡ್ಡು ಮಾಡೋದೆ ಕೆಲಸ. ಕಳೆದ ಒಂದು ವರ್ಷದ ಹಿಂದೆಯೇ ಬಿಜೆಪಿಗೆ ಹೋಗುವ ಮುನ್ನ ಸಾಲ ಇದೆ ತೀರಿಸಿ ಮತ್ತೆ ಕಾಂಗ್ರೆಸ್ ಬರುತ್ತೇನೆ ಅಂತಾ ರಮೇಶ್ ಹೇಳಿದ್ದಾನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಗೋಕಾಕ್ ನ ವ್ಯವಸ್ಥೆ ಬದಲಾವಣೆ ಆಗಬೇಕೆಂದರೆ ಶಾಸಕ ಬದಲಾವಣೆ ಆಗಬೇಕು. ಶಾಸಕ ರಮೇಶ್ ಬದಲಾವಣೆ ಆದರೆ ಅಂಬಿರಾವ್ ಪಾಟೀಲ್ ಅಧಿಕಾರ ಕಟ್ ಆಗುತ್ತೆ. ರಮೇಶ್ ಶಾಸಕನಾಗಿ ಇರುವವರೆಗೂ ಅಂಬಿರಾವ್ ಕೈಯಲ್ಲಿ ಅಧಿಕಾರ ಇರುವುದೇ ಎಂದರು.
ರಮೇಶ್ ಜಾರಕಿಹೊಳಿ ಈಗ ಕಾಂಗ್ರೆಸ್ ಬರುವುದಿಲ್ಲ ಮುಂದೆ ಬರಬಹುದು. ಸಾಲ ತೀರಿಸಬೇಕು, ದುಡ್ಡು ಮಾಡುವುದಕ್ಕೆ ಮೂರ್ನಾಲ್ಕು ವರ್ಷಕ್ಕೆ ಆಗುತ್ತದೆ.
ಆಗ ಯಾರು ಎಲ್ಲಿರ್ತಾರೆ ಗೊತ್ತಿಲ್ಲ. ಸೇವೆ ಮಾಡಲು ಬೇರೆಯವರು ರಾಜಕಾರಣ ಮಾಡಿದರೆ, ರಮೇಶ್ ಮತ್ತು ಅಳಿಯ ಅಂಬಿರಾವ್ ದುಡ್ಡು ಮಾಡಲು ರಾಜಕಾರಣ ಮಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಸುಣ್ಣದ ನೀರು ಕುಡಿದಿದ್ದಾನೆ
ಜಾತ್ರೆಯಲ್ಲಿ ಕೋಣ ಕಡಿಯಲು ಐದು ದಿನ ಪೂರ್ವದಲ್ಲಿ ಸುಣ್ಣದ ನೀರು ಕುಡಿಸುತ್ತಾರೆ. ಆ ರೀತಿ ತಪ್ಪಿ ರಮೇಶ್ ಜಾರಕಿಹೊಳಿ ಸುಣ್ಣದ ನೀರು ಕುಡಿದಿದ್ದಾನೆ. ಪಾರ್ಟಿ ಗಲಿಬಿಲಿ ಮಾಡಿ ರಮೇಶ್ ಸಿಕ್ಕಿಹಾಕಿಕೊಂಡು ಕುಳಿತಿದ್ದಾನೆ. ರಮೇಶ್ ರನ್ನು ಸೋಲಿಸಲು ಮತದಾರರಿಗೆ ಅವಕಾಶ ಇದೆ. ಉಪಚುನಾವಣೆಗೂ ರೆಡಿ, ಫ್ರೆಶ್ ಚುನಾವಣೆಗೂ ನಾವು ತಯಾರಿದ್ದೇವೆ ಎಂದು ಸತೀಶ್ ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ ಜಾರಕಿಹೊಳಿ ಲಖನ್ ಪರವಾಗಿ ಪ್ರಚಾರಕ್ಕೆ ಬರುವುದನ್ನ ಕಾದು ನೋಡಬೇಕಿದೆ. ಸಂತೋಷ ಮತ್ತು ಲಖನ್ ನಡುವೆ ಒಳ್ಳೆಯ ಸಂಬಂಧವಿದೆ ಎಂದು ಜಾರಕಿಹೊಳಿ ಕುಟುಂಬದ ಹೊಸ ಅಧ್ಯಾಯದ ಮುನ್ಸೂಚನೆ ನೀಡಿದರು.