ಗೋಕಾಕ:ಬೇಜವಾಬ್ದಾರಿಯಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ
ಬೇಜವಾಬ್ದಾರಿಯಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 1 –
ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ನೆರೆಪೀಡಿತ ಗ್ರಾಮಗಳಿಗೆ ಅಧಿಕಾರಿಗಳು ವಾರದೊಳಗಾಗಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು. ಕೆಲವು ಕುಟುಂಬಗಳು ಇನ್ನೂ ಶಾಲೆ, ದೇವಸ್ಥಾನಗಳಲ್ಲಿ ವಾಸಿಸುತ್ತಿದ್ದು ಅಂತಹವರಿಗೆ ಕೂಡಲೇ ಶೆಡ್‍ಗಳನ್ನು ನಿರ್ಮಿಸಿಕೊಡುವ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರದಂದು ಇಲ್ಲಿಯ ತಾಲೂಕಾ ಪಂಚಾಯತ ಸಭಾಗೃಹದಲ್ಲಿ ನಡೆಸಿದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ವ್ಯಾಪ್ತಿಯ ಪ್ರವಾಹದ ಸಂಬಂಧ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಿಜವಾದ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.
ಸಂಪೂರ್ಣ ಬಿದ್ದ ಮನೆಗಳು ಸಿ ವರ್ಗದಲ್ಲಿ ಬಂದಿದ್ದು, ಇವುಗಳನ್ನು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಎ ಅಥವಾ ಬಿ ವರ್ಗದಲ್ಲಿ ತೆಗೆದುಕೊಳ್ಳಬೇಕು. ಮನೆ ಬೀಳಲಾರದವು ಎ ಮತ್ತು ಬಿ ವರ್ಗದಲ್ಲಿ ಬಂದಿದ್ದು, ಇವುಗಳನ್ನು ಪರಿಶೀಲನೆ ಮಾಡಿ ಅರ್ಹ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂತ್ರಸ್ಥ ಕುಟುಂಬಗಳು ತಾತ್ಕಾಲಿಕ ಪರಿಹಾರ ಪಡೆದುಕೊಂಡಿದ್ದು, ಮನೆಗಳು ಬಿದ್ದಿದ್ದರೂ ಸಹ ಕುಸಿದ ಮನೆಗಳ ಯಾದಿಯಲ್ಲಿ ಅಂತಹವರ ಹೆಸರುಗಳು ಬಂದಿರುವುದಿಲ್ಲ. ಅಧಿಕಾರಿಗಳು ಜಾಗೃತಿಯಿಂದ ಕೆಲಸ ಮಾಡುವಂತೆ ಸೂಚಿಸಿದರು.
ಅಡಿಬಟ್ಟಿ ಗ್ರಾಮವು ಸ್ಥಳಾಂತರಗೊಂಡಿದ್ದು, ನಿವೇಶನ ಸಂಬಂಧ 21.17 ಎಕರೆ ಜಮೀನನ್ನು ಕೂಡಲೇ ಸರ್ವೇ ಮಾಡಿ ಹಕ್ಕುಪತ್ರಗಳು ಇದ್ದ ಕುಟುಂಬಗಳಿಗೆ ಜಾಗೆಯನ್ನು ಹಂಚಿಕೆ ಮಾಡಬೇಕು. ಹಕ್ಕುಪತ್ರ ಹೊಂದದ ಹೊಸ ಕುಟುಂಬಗಳಿಗೆ ನಿವೇಶನ ಕಲ್ಪಿಸಿಕೊಡಬೇಕು. ಕೃಷ್ಣಾ ನದಿ ಹಿನ್ನೀರಿನ ಹಿನ್ನೆಲೆಯಲ್ಲಿ ಹುಣಶ್ಯಾಳ ಪಿವಾಯ್ ಗ್ರಾಮವು ಸ್ಥಳಾಂತರಗೊಂಡಿದ್ದು, ರಿ.ಸ.ನಂ. 108 ರಲ್ಲಿ ಈಗಿರುವ ಅಳತೆಯನ್ನು ಕಡಿಮೆಗೊಳಿಸಿ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹುಣಶ್ಯಾಳ ಪಿಜಿ, ಢವಳೇಶ್ವರ, ಅರಳಿಮಟ್ಟಿ ಗ್ರಾಮಗಳಲ್ಲಿಯೂ ಸಂತ್ರಸ್ಥ ಕುಟುಂಬಗಳಿಗೆ ನಿವೇಶನದ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪ್ರವಾಹ ಹಾಗೂ ಮಳೆಯಿಂದ ಹಾನಿಗೀಡಾದ ಬೆಳೆಗಳ ಸಮೀಕ್ಷೆ ಮಾಡಿ ಕೂಡಲೇ ರೈತರಿಗೆ ಪರಿಹಾರ ಧನ ವಿತರಿಸಬೇಕು. ಗ್ರಾಮೀಣ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹಾಳಾಗಿದ್ದು, ಈ ರಸ್ತೆಗಳ ಸುಧಾರಣೆಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ರಸ್ತೆಗಳನ್ನು ಸುಧಾರಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಸೂಚಿಸಿದರು. ಪ್ರವಾಹ ಹಾಗೂ ನಿರಂತರ ಮಳೆಯಿಂದ ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು ಹಾಗೂ ಇತರೇ ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, ಕೂಡಲೇ ಸರ್ಕಾರಕ್ಕೆ ಮತ್ತೊಂದು ಅಂದಾಜು ಹಾನಿಯ ವಿವರ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೂಡಲಗಿ ಪುರಸಭೆ, ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿಗಳಿಗೆ ಎಸ್.ಎಫ್.ಸಿ ಯೋಜನೆಯಡಿ ಅನುದಾನ ಮಂಜೂರಾಗಿದ್ದು, ಈ ಅನುದಾನವನ್ನು ಕೇವಲ ರಸ್ತೆಗಳ ಸುಧಾರಣೆಗಾಗಿ ಬಳಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಂತ್ರಸ್ಥ ಕೆಲವೊಂದು ಕುಟುಂಬಗಳಿಗೆ ಕೆಲವೊಂದು ದಾಖಲಾತಿಗಳ ಸಮಸ್ಯೆ ಉಂಟಾಗಿದೆ. ಆದಾರ ಕಾರ್ಡ, ರೇಷನ್ ಕಾರ್ಡ, ಬ್ಯಾಂಕ್ ಅಕೌಂಟಗಳನ್ನು ಸಂತ್ರಸ್ಥರ ಕುಟುಂಬಗಳಿಗೆ ಮಾಡಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಯಾವುದೇ ಕಾರಣಕ್ಕೂ ಸಂತ್ರಸ್ಥರಿಗೆ ಅನ್ಯಾಯವಾಗಬಾರದು. ಅವರಿಗೆ ಸರ್ಕಾರದ ಪರಿಹಾರ ಧನ ನೀಡುವಲ್ಲಿ ಮೀನಮೇಷ ಎಣಿಸಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಖಡಕ್ ವಾರ್ನಿಂಗ್ ಮಾಡಿದರು.
ಎ.ಡಿ.ಸಿ ಪ್ರಭುಲಿಂಗ ಕವಳಿಕಟ್ಟಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ, ಡಿ.ಜೆ. ಮಹಾತ, ತಾಪಂ ಇಓ ಬಸವರಾಜ ಹೆಗ್ಗನಾಯಿಕ, ಉಪಸ್ಥಿತರಿದ್ದರು.