ಗೋಕಾಕ:ನಾವು ಆಚರಿಸುವ ಹಬ್ಬಗಳು ಅಸಹಾಯಕರಿಗೆ ಅನುಕೂಲವಾಗಬೇಕು : ರಜನಿ ಜೀರಗ್ಯಾಳ
ನಾವು ಆಚರಿಸುವ ಹಬ್ಬಗಳು ಅಸಹಾಯಕರಿಗೆ ಅನುಕೂಲವಾಗಬೇಕು : ರಜನಿ ಜೀರಗ್ಯಾಳ
ಗೋಕಾಕ ಜು 27: ಹಾಲು ಅಮೃತಕ್ಕೆ ಸಮಾನವಾದ್ದು, ಮೂಢ ನಂಬಿಕೆಯ ಆಚರಣೆಯಲ್ಲಿ ಹಾಲನ್ನು ವ್ಯರ್ಥ ಮಾಡದೇ ಅದರ ಅವಶ್ಯಕತೆ ಇರುವವವರಿಗೆ ನೀಡಬೇಕೆಂದು ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ ಹೇಳಿದರು.
ಗುರುವಾರದಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರ ಪಂಚಮಿ ನಿಮಿತ್ಯವಾಗಿ ಸಿರಿಗನ್ನಡ ಮಹಿಳಾ ವೇದಿಕೆ ತಾಲೂಕಾ ಘಟಕದ ವತಿಯಿಂದ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿದ ಅವರು, ನಾಗರ ಪಂಚಮಿ ಹಬ್ಬ ಮಹಿಳೆಯರಿಗೆ ದೊಡ್ಡ ಹಬ್ಬವಾಗಿದ್ದು, ಹಬ್ಬದ ಅಂಗವಾಗಿ ಮೌಢ್ಯ ಆಚರಣೆಯನ್ನು ನಡೆಸುವ ಮೂಲಕ ನಾವಿಂದು ಹಾಲನ್ನು ವ್ಯರ್ಥ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಾವು ಆಚರಿಸುವ ಹಬ್ಬಗಳು ಅಸಹಾಯಕರಿಗೆ ಅನುಕೂಲವಾಗಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಮಹಿಳಾ ವೇದಿಕೆ ವತಿಯಿಂದ ಹಾಲನ್ನು ಹುತ್ತಗಳಿಗೆ ಹಾಗೂ ನಾಗರ ಮೂರ್ತಿಗಳಿಗೆ ಎರೆಯದೆ ಬಡ ರೋಗಿಗಳಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ವಿತರಿಸುವ ಕಾರ್ಯವನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆ ತಾಲೂಕಾಧ್ಯಕ್ಷೆ ಸಂಗೀತಾ ಬನ್ನೂರ, ಪೂಜಾ ಹಿರೇಮಠ, ಶೈಲಾ ಕೊಕ್ಕರಿ, ರಾಜೇಶ್ವರಿ ಹಿರೇಮಠ, ರಾಜೇಶ್ವರಿ ವಡೇಯರ, ವೈಶಾಲಿ ಭರಬರಿ, ಮಹಾನಂದಾ ಗುಣಕಿ, ಸುಧಾ ಮಠಪತಿ, ವಂದನಾ ಸುಪಲಿ, ಕುಮಾರಿ ಪೂಜಾ ಜೀರಗ್ಯಾಳ, ಡಾ|| ಮಹೇಶ ಕೋಣಿ, ಡಾ|| ಡಿ.ಆರ್.ತುಬಾಕಿ, ಡಾ|| ಎಮ್.ಎಸ್.ಹಡಗಿನಾಳ, ಆರ್.ಬಿ.ಎಸ್.ಕೆ ವೈದ್ಯರ ತಂಡದವರು ಇದ್ದರು.