ಗೋಕಾಕ:ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮತದಾರರ ಸಹಿ ಅಭಿಯಾನ
ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮತದಾರರ ಸಹಿ ಅಭಿಯಾನ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 26 :
ತಾಲೂಕಾ ಸ್ವೀಪ ಸಮೀತಿ ಮತ್ತು ಪುರಸಭೆ ಕೊಣ್ಣೂರ ಇವರ ಸಹಯೋಗದಲ್ಲಿ ಗೋಕಾಕ ಮತಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಶೇ. 100ರಷ್ಟು ಮತದಾನದ ಗುರಿಯೊಂದಿಗೆ ತಾಲೂಕಿನ ಕೊಣ್ಣೂರ ಪುರಸಭೆಯ ವ್ಯಾಪ್ತಿಯ ಮರಡಿಮಠ ನಾಯಿಕವಾಡಿ ಮತದಾರರಿಗೆ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮತದಾರರ ಸಹಿ ಅಭಿಯಾನಕ್ಕೆ ಗೋಕಾಕ ನಗರಸಭೆ ಎಇಇ ವಿ.ಎಸ್.ತಡಸಲೂರ ಎಂಸಿಸಿ ನೋಡಲ್ ಅಧಿಕಾರಿ ಅಶೋಕ ಮಲಬನ್ನವರ ಅವರು ಸಹಿಯನ್ನು ಮಾಡುವ ಮೂಲಕ ಚಾಲನೆಯನ್ನು ನೀಡಿದರು.
ಸುಮಾರು 200ಕ್ಕೂ ಹೆಚ್ಚು ಸಾರ್ವಜನಿಕರು ಮತದಾನ ಜಾಗೃತಿ ಸಹಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಡಿ-5 ರಂದು ಜರುಗುವ ವಿಧಾನಸಭೆ ಉಪಚುನಾವಣೆಯಲ್ಲಿ ನಾವೆಲ್ಲ ಕಡ್ಡಾಯ ಮತದಾನ ಮಾಡುತ್ತೇವೆ ಎಂದು ವಾಗ್ದಾನ ನೀಡಿದರು.
ಮತದಾನ ಜಾಗೃತಿ ಸಹಿ ಅಬಿಯಾನದ ನೇತೃತ್ವವನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಮಿಲ್ಲಾನಟ್ಟಿ ವಹಿಸಿ“ ಕಡ್ಡಾಯ ಮತದಾನ ಮಾಡೋಣ ಪ್ರಜಾಪ್ರಭುತ್ವ ಗೆಲ್ಲಿಸೋಣ” ಎಂಬ ಘೋಷಣೆಯೊಂದಿಗೆ ಮತದಾನ ಜಾಗೃತಿ ಸಹಿ ಅಬಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ ಮಾತನಾಡಿ, ಡಿ-5 ರಂದು ನಡೆಯುವ ಗೋಕಾಕ ಮತಕ್ಷೇತ್ರದ ವಿಧಾನಸಭೆ ಉಪಚುನಾವಣೆಯ ದಿನದಂದು ಎಲ್ಲ ಕೆಲಸಕಾರ್ಯಗಳನ್ನು ಬದಿಗಿರಿಸಿ, ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಮತ್ತು ಶಾಂತಿ ಮತ್ತು ಸುವ್ಯವಸ್ಥಿತ ಮತದಾನ ಪ್ರಕ್ರಿಯೆಗೆ ಎಲ್ಲರೂ ಸಹಕರಿಸಿ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿ ಪ್ರತಿಶತ 100 ರಷ್ಟು ಮತದಾನಕ್ಕೆ ಕರೆ ನೀಡಿದರು.
ಅಭಿಯಾನದಲ್ಲಿ ಪುರಸಭೆ ಅಧಿಕಾರಿಗಳಾದ ಎಂ.ಎಸ್.ತೇಲಿ, ವಾಯ್.ಎನ್.ಚಲವಾದಿ, ಎಂ.ಎ. ಪೆದಣ್ಣವರ ರಮೇಶ ಭವಾನೆ, ಡಿ.ಡಿ ಜಕ್ಕನ್ನವರ, ಈಶ್ವರ ಕೋನಕೇರಿ, ಗಣೇಶ ಪಾಟೀಲ, ಆನಂದ ಕಳ್ಳಿಮನಿ ಸೇರಿದಂತೆ ಅನೇಕರು ಇದ್ದರು.