RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕುಮಾರಸ್ವಾಮಿ ಸ್ಟಾರ್ ಹೋಟೇಲ್‍ನಿಂದ ಆಡಳಿತ ನಡೆಸಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್

ಗೋಕಾಕ:ಕುಮಾರಸ್ವಾಮಿ ಸ್ಟಾರ್ ಹೋಟೇಲ್‍ನಿಂದ ಆಡಳಿತ ನಡೆಸಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ 

ಕುಮಾರಸ್ವಾಮಿ ಸ್ಟಾರ್ ಹೋಟೇಲ್‍ನಿಂದ ಆಡಳಿತ ನಡೆಸಿದ್ದಾರೆ : ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 27 :

 
ಕುಮಾರಸ್ವಾಮಿ ಅವರು ವಿಧಾನಸೌಧದಿಂದ ರಾಜ್ಯಾಡಳಿತ ನಡೆಸಿಲ್ಲ. ಸ್ಟಾರ್ ಹೋಟೇಲ್‍ನಿಂದ ಆಡಳಿತ ನಡೆಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ ಕಟೀಲ ಆರೋಪಿಸಿದರು.
ಅವರು ಬುಧವಾರದಂದು ಸಂಜೆ ನಗರದ ಕೊಳವಿ ಹನಮಂತ ದೇವಸ್ಥಾನದಿಂದ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ಜರುಗಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಪ್ರಚಾರಾರ್ಥ ಬೃಹತ್ ರೋಡ್ ಶೋ ನಲ್ಲಿ ಪಾಲ್ಗೊಂಡು ಮಾತನಾಡಿದರು.
ಜೆಡಿಎಸ್ ಕಾಂಗ್ರೇಸ್ಸಿನ ಶಾಸಕರು ಹೊಟೇಲ್ ಮುಂದೆ ಫೈಲ್ ಹಿಡಿದುಕೊಂಡು ನಿಲ್ಲಲು ಸಾಧ್ಯವಾಗದೇ ವಂಶಾಡಳಿತ ಹಾಗೂ ಕುಟುಂಬ ರಾಜಕೀಯಕ್ಕೆ ಬೇಸತ್ತು ತಮ್ಮ ಸ್ವಾಭಿಮಾನಕ್ಕಾಗಿ ಪಕ್ಷ ತ್ಯಜಿಸಿದ್ದಾರೆ. ಇಂತಹ ಸ್ವಾಭಿಮಾನಿ 17 ಜನ ಶಾಸಕರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿರುವ ಈ ಎಲ್ಲ ಶಾಸಕರುಗಳಿಗೆ ಮುಂದಿನ ದಿನಗಳಲ್ಲಿ ಮಹತ್ವದ ಹುದ್ದೆ ದೊರೆಯಲಿದೆ ಎಂದು ಹೇಳಿದರು.
ಶಾಸಕತ್ವಕ್ಕೆ ರಾಜೀನಾಮೆ ನೀಡಿ ಮಂತ್ರಿ ಪದವಿಯನ್ನು ಬಿಟ್ಟು ಬಂದ ಇವರನ್ನು ಮತ್ತೇ ನಾವು ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾಗಿದೆ. ಇದು ನಮ್ಮ ಕರ್ತವ್ಯವಾಗಿದೆ. ಕರ್ನಾಟಕ ಕಲ್ಯಾಣಗೋಸ್ಕರ ರಮೇಶ ಜಾರಕಿಹೊಳಿ ಅವರ ತ್ಯಾಗ ದೊಡ್ಡದ್ದಾಗಿದೆ. ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಲು ರಮೇಶ ಜಾರಕಿಹೊಳಿ ಅವರ ತ್ಯಾಗವೇ ಕಾರಣವಾಗಿದೆ. ಗೋಕಾಕ ಮತಕ್ಷೇತ್ರ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಅನರ್ಹರನ್ನು ಆಶೀರ್ವದಿಸಿ ಅರ್ಹರನ್ನಾಗಿ ಮಾಡಿ ಎಂದು ಹೇಳಿದ ಅವರು, ಅನರ್ಹ ಶಾಸಕರನ್ನು ಕರ್ನಾಟಕದ ಮುತ್ತುಗಳೆಂದು ಬಣ್ಣಿಸಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬರಲು ಬಾಲಚಂದ್ರ ಜಾರಕಿಹೊಳಿ ಕಾರಣರಾದರೆ, ಈಗ ಮತ್ತೊಮ್ಮೆ ಅಧಿಕಾರಕ್ಕೆ ಬರಲು ರಮೇಶ ಜಾರಕಿಹೊಳಿ ಕಾರಣರಾಗಿದ್ದಾರೆ. ಹಣಕ್ಕಾಗಿ ಅಥವಾ ಅಧಿಕಾರಕ್ಕಾಗಿ ರಮೇಶ ಅವರು ಮೈತ್ರಿ ಸರ್ಕಾರ ತ್ಯಜಿಸಿಲ್ಲ. ಸ್ವತಃ ಮೈತ್ರಿ ಸರ್ಕಾರದ ನಾಯಕರುಗಳು ಏನೆಲ್ಲ ಆಸೆ ಆಮೀಷಗಳನ್ನು ಒಡ್ಡಿದರೂ ಅವುಗಳಿಗೆ ಬಲಿಯಾಗದೇ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ, ಕಲ್ಯಾಣ ಕರ್ನಾಟಕಕ್ಕಾಗಿ ಮತ್ತು ಗೋಕಾಕ ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಲು ರಮೇಶ ಜಾರಕಿಹೊಳಿ ಸೇರಿದಂತೆ ಇನ್ನೀತರ ಶಾಸಕರುಗಳು ಬಿಜೆಪಿಗೆ ಬಂದಿದ್ದಾರೆಂದು ಹೇಳಿದರು.
ಸಿದ್ಧರಾಮಯ್ಯ ಅನರ್ಹ : ರಮೇಶ ಜಾರಕಿಹೊಳಿ ಸೇರಿದಂತೆ 17 ಶಾಸಕರ ವಿರುದ್ಧ ಟೀಕಾಸ್ತ್ರ ಮಾಡುತ್ತಿರುವ ಕಾಂಗ್ರೇಸ್ ನಾಯಕ ಸಿದ್ಧರಾಮಯ್ಯ ಅವರೇ ನಿಜವಾದ ಅನರ್ಹರು. ಕರ್ನಾಟಕದಲ್ಲಿ ಕಾಂಗ್ರೇಸ್ ಮುಕ್ತ ಮಾಡುತ್ತಿರುವ ಕೀರ್ತಿ ಸಿದ್ಧರಾಮಯ್ಯನವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯ ಮಾಡಿದರು.
ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮುಂದಿನ ಮೂರುವರೆ ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸುತ್ತದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ರಮೇಶ ಜಾರಕಿಹೊಳಿ ಸೇರಿದಂತೆ ಬಿಜೆಪಿಯಿಂದ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಗುವುದು. ಎಲ್ಲ 15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ನಂ.1 ಆಡಳಿತ ನೀಡಲಿದೆ ಎಂದು ಹೇಳಿದರು.
ಮೋದಿ ಬಲಾಢ್ಯ ನಾಯಕ : ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿಗೆ ಶಾಂತಿ ಮಂತ್ರ ಜಪಿಸುತ್ತಿದ್ದಾರೆ. ಜೊತೆಗೆ ಜಗತ್ತಿನ ಬಲಾಢ್ಯ ರಾಷ್ಟ್ರಗಳೊಂದಿಗೆ ಪೈಪೋಟಿ ನೀಡಬಲ್ಲ ಏಕೈಕ ವ್ಯಕ್ತಿ ಮೋದಿ ಅವರಾಗಿದ್ದಾರೆಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಿಎಂ ಯಡಿಯೂರಪ್ಪನವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡುವ ಮೂಲಕ ರಾಜ್ಯದ ಕಲ್ಯಾಣಕ್ಕೋಸ್ಕರ ಜೊತೆಗೆ ಗೋಕಾಕ ಸಮಗ್ರ ಅಭಿವೃದ್ಧಿಗೆ ಡಿ.5 ರಂದು ನಡೆಯುವ ಉಪ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿಯವರನ್ನು ಗೆಲ್ಲಿಸಬೇಕು. ಡಿ.9 ರ ನಂತರ ರಮೇಶ ಜಾರಕಿಹೊಳಿ ಅವರು ಪ್ರಭಾವಿ ಖಾತೆಯೊಂದರ ಸಚಿವರಾಗುವ ಮೂಲಕ ಈ ಜಿಲ್ಲೆಯ ಏಳ್ಗೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಹಿರಿಯ ಶಾಸಕ ಹಾಗೂ ಮಾಜಿ ಸಚಿವರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಂಸತ್ ಸದಸ್ಯ ಭಗವಂತ ಖೂಬಾ, ಶಾಸಕರಾದ ಎ.ಎಸ್.ಪಾಟೀಲ(ನಡಹಳ್ಳಿ), ಸೋಮನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಶಿಕಾಂತ ನಾಯಿಕ, ಬೆಳಗಾವಿ ಪ್ರಭಾರಿ ಈರಪ್ಪ ಕಡಾಡಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಳೀನಕುಮಾರ ಕಟೀಲ್ ಅವರು ಗೋಕಾಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಿದ್ಧಪಡಿಸಿದರುವ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

Related posts: