ಗೋಕಾಕ:ನೆರೆ ಸಂತ್ರಸ್ತರಿಗೆ ನೆರವನ್ನು ನೀಡುವಲ್ಲಿ ಸಂಘ- ಸಂಸ್ಥೆಗಳು ಕಾರ್ಯ ಮಾದರಿಯಾಗಿದೆ : ಶಾಸಕ ರಮೇಶ
ನೆರೆ ಸಂತ್ರಸ್ತರಿಗೆ ನೆರವನ್ನು ನೀಡುವಲ್ಲಿ ಸಂಘ- ಸಂಸ್ಥೆಗಳು ಕಾರ್ಯ ಮಾದರಿಯಾಗಿದೆ : ಶಾಸಕ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 5 :
ನೆರೆ ಹಾವಳಿಗೆ ತುತ್ತಾದ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ನೆರವನ್ನು ನೀಡುವಲ್ಲಿ ಸಂಘ-ಸಂಸ್ಥೆಗಳು ಕಾರ್ಯ ಮಾದರಿಯಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ನಗರಸಭೆಯ ಸಮುದಾಯ ಭವನದಲ್ಲಿ ಕರವೇ ತಾಲೂಕಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಇತ್ತಿಚೆಗೆ ಸಂಭವಿಸಿದ ಜಲಪ್ರವಾಹದ ಕುರಿತಾದ ಲೇಖಕ ಸಾದಿಕ ಹಲ್ಯಾಳ ಅವರ ರಚಿತ ಜಲಪ್ರಳಯ ಪುಸ್ತಕ ಬಿಡುಗಡೆಗೊಳಿಸಿ ಹಾಗೂ ಪ್ರವಾಹದ ಸಮಯದಲ್ಲಿ ಜೀವದ ಹಂಗು ತೊರೆದ ಸಂತ್ರಸ್ತರನ್ನು ರಕ್ಷಿಸಿದ ಮಹಾನ ಜೀವಿಗಳಿಗೆ ಶೌರ್ಯ ಪ್ರಶಸ್ತಿ, ನೆರೆ ಸಂತ್ರಸ್ತರಿಗಾಗಿ ನಿಸಾರ್ಥ ಸೇವೆಗೈದ ವಿವಿಧ ಸಂಸ್ಥೆಯ ಪದಾಧಿಕಾರಿಗಳಿಗೆ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ವರ್ಷ ಅಗಸ್ಟ್ ತಿಂಗಳು ಗೋಕಾಕ ತಾಲೂಕಿಗೆ ಎಂದಿಗೂ ಮರೆಯಲಾಗದ ಪ್ರಳಾಯಂತಕ ದಿನಗಳಾಗಿದ್ದವು. ಅಂದು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯವನ್ನು ತುಂಬುವ ಕಾರ್ಯವನ್ನು ಹಾಗೂ ತಕ್ಷಣ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಕೆಲವೊಂದು ರಾಜಕೀಯ ಹಿತಾಸಕ್ತಿಗಳನ್ನು ಇಟ್ಟುಕೊಂಡು ಬಂದವರು. ನನ್ನ ವಿರುದ್ಧ ಅಪಪ್ರಚಾರದ ಸುರುಮಳೆಯನ್ನೇ ಗೈದರು. ಇಲ್ಲಿಯ ಜನತೆಗೆ ಬಂದ ಸಂಕಷ್ಟದ ದಿನಗಳಲ್ಲಿ ನಾನು ಕೂಡಾ ಸಂಕಷ್ಟದಲ್ಲಿದ್ದೆ. ಆದರೂ ಕೂಡಾ ನನ್ನ ಕರ್ತವ್ಯಕ್ಕೆ ಚ್ಯುತಿ ಬರದ ಹಾಗೇ ನಿಭಾಯಿಸಿದ್ದೇನೆ. ಇಂದು ಕೂಡಾ ಅವರು ಹೊಸ ಬದುಕನ್ನು ಕಟ್ಟಿಕೊಡಲು ಬದ್ಧನಾಗಿ ಕಾರ್ಯಪ್ರವೃತ್ತನಾಗಿದ್ದೇನೆ. ಸತ್ಯಕ್ಕೆ ಎಂದಿಗೂ ಸಾವಿಲ್ಲ ಎಂದು ಗೋಕಾಕ ಮತಕ್ಷೇತ್ರದ ಜನತೆ ತೋರಿಸಿಕೊಟ್ಟಿದ್ದಾರೆ. ಉಪಚುನಾವಣೆಯಲ್ಲಿ ಡೊಂಗಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.
ಸಾಹಿತಿಗಳಾದ ಡಾ.ಸಿ.ಕೆ.ನಾವಲಗಿ ಮತ್ತು ಮಹಾಲಿಂಗ ಮಂಗಿ ಅವರು ಮಾತನಾಡಿ, ಜಲ ಪ್ರವಾಹದ ಸಂದರ್ಭದಲ್ಲಿ ಸಂಬಂವಿಸಿದ ನೈಜ ಘಟನೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ಇತಿಹಾಸದ ಪುಟಕ್ಕೆ ಸಾದಿಕ ಹಲ್ಯಾಳ ಅವರು ಸೇರಿಸಿದ್ದಾರೆ. ಗೋಕಾವಿ ನಾಡು ಕಂಡ ದುರಂತ ಕಥೆಯನ್ನು ವಾಸ್ತವ್ಯದ ಚರಿತ್ರೆಯನ್ನು ಮನಮಟ್ಟುವಂತೆ ಎಳೆ-ಎಳೆಯಾಗಿ ಬಿಡಿಸಿಟ್ಟು ಓದುಗರ ಕಣ್ಣಮುಂದೆ ಬರುವ ಹಾಗೇ ಚಿತ್ರಿಸಿದ್ದಾರೆಂದು ತಿಳಿಸಿದ ಅವರು ಪರಿಸರ ರಕ್ಷಿಸಿ, ಪ್ರಕೃತಿ ವಿಕೋಪಗಳ ದುರಂತಗಳನ್ನು ತಡೆಗಟ್ಟಲು ನಮ್ಮ ಮುಂದಿನ ಪೀಳಿಗೆ ಕೈಗೊಳ್ಳಲು ಈ ಪುಸ್ತಕ ಮಾದರಿಯಾಗಿದೆ ಎಂದು ಹೇಳಿದರು.
ಪ್ರವಾಹದ ಸಮಯದಲ್ಲಿ ಜೀವದ ಹಂಗು ತೊರೆದ ಸಂತ್ರಸ್ತರನ್ನು ರಕ್ಷಿಸಿದ ಎಕ್ಸಪ್ಲೋರ ದಿ ಔಡ್ಟೋರನ ಮುಖ್ಯಸ್ಥ ಅಯೂಬಖಾನ , ಕುಲಗೋಡ ಪಿಎಸ್‍ಐ ಹನುಮಂತ ನೇರಳೆ, ಗೋಕಾಕ ಗ್ರಾಮೀಣ ಠಾಣೆಯ ಎಎಸ್‍ಐ ಆರ್.ವಾಯ್ ತಳವಾರ ಅವರಿಗೆ ಶೌರ್ಯ ಪ್ರಶಸ್ತಿ, ನೆರೆ ಸಂತ್ರಸ್ತರಿಗಾಗಿ ನಿಸಾರ್ಥ ಸೇವೆಗೈದ ಸತೀಶ್ ಜಾರಕಿಹೊಳಿ ಫೌಂಡೇಶನ್, ದಿ.ಕುಮಾರಿ ದೀಪಾ ನಾಯ್ಕರ ಸೇವಾ ಸಮಿತಿ ಪದಾಧಿಕಾರಿಗಳಿಗೆ ಹಾಗೂ ವಿಜಯಪುರದ ಕುಮಾರಿ ಸಾನ್ವಿ ಉಮೇಶ್ ಕುಲಕರ್ಣಿ ಮತ್ತು ಧಾರವಾಡದ ಅನಿಲ ರಜಪೂತ ಅವರುಗಳ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಗೆ “ಸೇವಾ ಪ್ರಶಸ್ತಿ” ನೀಡಿ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನ್ನವರ ವಹಿಸಿದ್ದರು.
ವೇದಿಕೆ ಮೇಲೆ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ನಗರ ಸಭೆ ಸದಸ್ಯ ಎಸ್.ಎ.ಕೋತವಾಲ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಲೇಖಕ ಸಾದಿಕ ಹಲ್ಯಾಳ ಹಾಗೂ ಅವರ ತಂದೆ-ತಾಯಿ ಇದ್ದರು.
ಶಿಕ್ಷಕರಾದ ಆರ್.ಎಮ್.ಅಗಳೆಣ್ಣವರ ಸ್ವಾಗತಿಸಿದರು, ಆರ್.ಎಲ್.ಮಿರ್ಜಿ ವಂದಿಸಿದರು, ಜಿ.ಆರ್.ಮಾಳಗಿ ವಂದಿಸಿದರು.