ಗೋಕಾಕ: ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಲ್ಲಿ ಹುಟ್ಟಲು ಬಯಸುತ್ತೇನೆ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ
ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಲ್ಲಿ ಹುಟ್ಟಲು ಬಯಸುತ್ತೇನೆ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 1 :
ಕನ್ನಡಿಗರು ನೀಡಿದ ಪ್ರೀತಿ ವಾತ್ಸಲ್ಯ ಬೇರೆ ಯಾರಿಂದಲೂ ದೊರೆತಿಲ್ಲ.ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಲ್ಲಿ ಹುಟ್ಟಲು ಬಯಸುತ್ತೇನೆ ಎಂದು ಖ್ಯಾತ ಹಿನ್ನಲೆ ಗಾಯಕ,ಪದ್ಮಭೂಷಣ ಡಾ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿದರು.
ಶನಿವಾರ ಸಂಜೆ ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ 15ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭದಲ್ಲಿ ಶ್ರೀಮಠದ ವತಿಯಿಂದ ನೀಡಲಾದ 1 ಲಕ್ಷ ನಗದು ಹಾಗೂ ಕಾಯಕಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಂಜಿನೀಯರ ಆಗಬೇಕೆಂಬ ಎಂಬ ಸಂಕಲ್ಪ ಇತ್ತು ಆದರೆ ವಿಧಿ ಗಾಯಕನಾಗಿ ಬೆಳೆಸಿದೆ ಭಾರತದಲ್ಲಿ ಇರುವ 15 ಭಾμÉಗಳಲ್ಲಿ ಹಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಬೇರೆಯವರಿಗೆ ಸಹ ಈ ವಿದ್ಯೆಯನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆಂಧ್ರದಲ್ಲಿ ಹುಟ್ಟಿ ಬೆಳೆದರು ಸಹ ನಾನು ಹಿನ್ನೆಲೆ ಗಾಯಕನಾಗಿ ಹಾಡಿದ ಎರಡನೇ ಹಾಡೆ ಕನ್ನಡ, ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿವರಗೆ ನಡೆದಿದೆ. ಕನ್ನಡಿಗರು ಕೊಟ್ಟ ಪ್ರೀತಿ ವಾತ್ಸಲ್ಯ ಇಡೀ ದೇಶದಲ್ಲಿ ನನಗೆ ಸಿಕ್ಕಿಲ್ಲ ಇದನ್ನು ನಾನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರಲ್ಲದೇ ಶ್ರೀಮಠದ ವತಿಯಿಂದ ಕಾಯಕಶ್ರೀ ಪ್ರಶಸ್ತಿ ದೊರೆತ್ತಿದ್ದು ನಾನು ಜೀವನ ಪರ್ಯಂತ ಮರೆಯಲಾಗದ ಪ್ರಶಸ್ತಿಯಾಗಿದೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಳಗಾವಿ ರುದ್ರಾಕ್ಷಿಮಠದ ಡಾ: ಅಲ್ಲಮಪ್ರಭು ಮಹಾಸ್ವಾಮಿಜಿ ವಹಿಸಿದ್ದರು. ಸಮಾರಂಭವನ್ನು ಐಎಎಸ್ ಅಧಿಕಾರಿ ಡಾ: ಅಶೋಕ ದಳವಾಯಿ ಉದ್ಘಾಟಿಸಿದರು.
ವೇದಿಕೆ ಮೇಲೆ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ, ರಾಯಚೂರಿನ ಭಾರತದ ಕೃಷಿ ಮಹಿಳೆ ಕವಿತಾ ಮಿಶ್ರಾ, ಮ್ಯಸೂರಿನ ರಾಜ್ಯ ಕಬ್ಬು ಬೆಳೆಗಾರರ ಅಧ್ಯಕ್ಷ ಕುರುಬೂರ ಶಾಂತಕುಮಾರ, ಹಿರಾ ಶುಗರ್ಸ್‍ನ ಅಶೋಕ ಪಾಟೀಲ, ಮಂಡ್ಯ ಜಿಲ್ಲೆಯ ಪ್ರಗತಿಪರ ರೈತ ಶಂಕರ ನಾರಾಯಣ, ಶಿಗ್ಗಾಂವ ಪ್ರಗತಿಪರ ರೈತ ಮಹಿಳೆ ರಾಜೇಶ್ವರಿ ಪಾಟೀಲ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಸುರೇಶ ದೇಸಾಯಿ, ಜೆಡಿಎಸ್ ಮುಖಂಡ ಅಶೋಕ ಪೂಜಾರಿ, ಮಂಗಳೂರಿನ ಹಫಿಝಮಹ್ಮದ ಸುಫ್ಸಾನ್‍ಸಶಾಫಿ, ಬಸನಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.ಮುಖಂಡರುಗಳಾದ ವಿವೇಕ ಜತ್ತಿ, ಮಹಾಂತೇಶ ವಾಲಿ, ಮಲ್ಲಿಕಾರ್ಜುನ ಈಟಿ, ಡಾ.ಸಿ.ಕೆ ನಾವಲಗಿ, ಬಸನಗೌಡ ಪಾಟೀಲ, ಡಾ: ವಿಶ್ವನಾಥ ಶಿಂಧೋಳಿಮಠ, ಶ್ರೀಮತಿ ರಾಜೇಶ್ವರಿ ಬೆಟ್ಟದಗೌಡ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಿತು.
ಕಾರ್ಯಕ್ರಮವನ್ನು ಎಸ್.ಕೆ.ಮಠದ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ಶೈಲಾ ಕೊಕ್ಕರಿ ವಂದಿಸಿದರು.