ಬೆಟಗೇರಿ:ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಅಂಗಡಿಗಳ ಬಾಗಿಲು ತೆರೆದು ಗ್ರಾಹಕರಿಗೆ ವಸ್ತುಗಳನ್ನು ಕೂಡಬೇಕು : ಬಿ.ಬಿ.ಬಿರಾದಾರ
ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಅಂಗಡಿಗಳ ಬಾಗಿಲು ತೆರೆದು ಗ್ರಾಹಕರಿಗೆ ವಸ್ತುಗಳನ್ನು ಕೂಡಬೇಕು : ಬಿ.ಬಿ.ಬಿರಾದಾರ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮಾ 29 :
ಗ್ರಾಮದ ಅಂಗಡಿ-ಮುಂಗಟ್ಟು ಮಾಲೀಕರು ದಿನಬಳಕೆ ವಸ್ತುಗಳಾದ ಹಣ್ಣು, ತರಕಾರಿ ಮತ್ತು ಕಿರಾಣಿ ಸಾಮಗ್ರಿಗಳನ್ನು ಗ್ರಾಹಕರಿಂದ ಪೋನ್ ಮೂಲಕ ಆರ್ಡರ್ ಪಡೆದು ಮನೆ ಮನೆಗೆ ಹೋಗಿ ವಿತರಿಸಬೇಕು. ಇಲ್ಲವಾದಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯ ನಿಗದಿತ ಅವಧಿಯಲ್ಲಿ ಮಾತ್ರ ಅಂಗಡಿಗಳ ಬಾಗಿಲು ತೆರೆದು ಗ್ರಾಹಕರಿಗೆ ವಸ್ತುಗಳನ್ನು ಕೂಡಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಬೆಟಗೇರಿ ಗ್ರಾಮದ ಬೀಟ್ ಪೊಲೀಸ್ ಪೇದೆ ಬಿ.ಬಿ.ಬಿರಾದಾರ ಹೇಳಿದರು.
ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ರವಿವಾರ ಮಾ.29 ರಂದು ಆಯೋಜಿಸಿದ ಕರೊನಾ ವೈರಸ್ ನಿಯಂತ್ರಣಾ ಕ್ರಮಗಳ ಕುರಿತು ಜಾಗೃತಿ ಮತ್ತು ದಿನಸಿ ಅಂಗಡಿಗಳ ಮಾಲೀಕರಿಗೆ ಮಾಹಿತಿ ನೀಡುವ ಕಾರ್ಯಾಕ್ರಮದಲ್ಲಿ ಮಾತನಾಡಿ, ಜೀವನಾವಶ್ಯಕ ವಸ್ತುಗಳನ್ನು ಮಾರಾಟ ಮಾಡುವವರು ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ದಿನಸಿ ಮತ್ತು ಮತ್ತೀತರ ವಸ್ತುಗಳನ್ನು ನೀಡಬೇಕು. ಹೊರಗಡೆ ಬಂದಾಗ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಊರಲ್ಲಿ ಬೇಕಾಬಿಟ್ಟಿಯಾಗಿ ತಿರುಗುವುದು, ಅನವಶ್ಯಕವಾಗಿ ವಾಹನಗಳ ಮೇಲೆ ಸುತ್ತುವÀವರ ಮೇಲೆ ದಂಡ ವಿಧಿಸಿ, ವಾಹನಗಳನ್ನು ಸೀಜ್ ಮಾಡಲಾಗುವುದು ಎಂದರು.
ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಮಾತನಾಡಿ, ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಖಕ್ಕೆ ತಪ್ಪದೇ ಮಾಸ್ಕ್ ಧರಿಸಬೇಕು. ಕರೋನಾ ವೈರಸ್ ಕುರಿತು ಹಾಗೂ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಹೇಳಿದರು. ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್, ಸುರೇಶ ಬಾಣಸಿ, ಪರಸರಾಮ ಇಟಗವಡ್ರ, ಗೌಡಪ್ಪ ಮಾಳೇದ, ಈರಣ್ಣ ದಂಡಿನ, ಶಿವಾನಂದ ಐದುಡ್ಡಿ, ಶ್ರೀಧರ ದೇಯಣ್ಣವರ, ರಮೇಶ ಮುಧೋಳ, ಅಶೋಕ ದೇಯಣ್ಣವರ, ಸಂತೋಷ ಮಹಾಲ್ಮನಿ, ಹಜರತ್ ಮಿರ್ಜಾನಾಯ್ಕ, ಸ್ಥಳೀಯ ಕಿರಾಣಿ, ಔಷಧ ಅಂಗಡಿ ಮಾಲೀಕರು, ಗ್ರಾಪಂ ಸಿಬ್ಬಂಧಿತರರು ಇದ್ದರು.
ಬೀಕೊ ಎನ್ನುತ್ತಿರುವ ಬೀದಿ ಓಣಿಗಳು: ಕರೋನಾ ವೈರಸ್ ಹರಡದಂತೆ ಲಾಕ್ ಡೌನ್ ಘೋಷಿಸಿದ ಹಿನ್ನಲೆಯಲ್ಲಿ ಬೆಟಗೇರಿ ಗ್ರಾಮದಲ್ಲಿ ಮಾ.29 ರಂದು ಸಹ ರವಿವಾರ ಸಂತೆ ಸಂಪೂರ್ಣ ರದ್ದುಗೊಂಡಿತ್ತು. ಕಳೆದ ಒಂದು ವಾರದಿಂದ ಸ್ಥಳೀಯ ಬೀದಿ, ಓಣಿಗಳು ಬೀಕೊ ಎನ್ನುತ್ತಿದ್ದವು. ಅಲ್ಲಲ್ಲಿ ಅನಾವಶ್ಯಕವಾಗಿ ಬೀದಿಗಿಳಿದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಪೊಲೀಸರು, ಗ್ರಾಪಂ ಸಿಬ್ಬಂದಿ ಖಡಕ್ ಸೂಚನೆ ನೀಡಿ ಬೆದರಿಸಿ ಮನೆ ಕಡೆ ದಾರಿ ಹಿಡಿಯುವಂತೆ ಮಾಡಿದರು.