ಗೋಕಾಕ;ದಿ.4ರಿಂದ ಲಾಕ್‍ಡೌನ್ ಸಡಿಲಿಕೆಯಿಂದ ಗೋಕಾಕ ಜನತೆಗೆ ತುಸು ನೆಮ್ಮದಿ
ದಿ.4ರಿಂದ ಲಾಕ್‍ಡೌನ್ ಸಡಿಲಿಕೆಯಿಂದ ಗೋಕಾಕ ಜನತೆಗೆ ತುಸು ನೆಮ್ಮದಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 3 :
ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಕರೆಯಿಂದಾಗಿ ಕಳೆದ 40 ದಿನಗಳಿಂದ ಕಟ್ಟುನಿಟ್ಟಿನ ಲಾಕ್‍ಡೌನ್ ಪಾಲನೆಯಿಂದ ಕಂಗೆಟ್ಟಿದ್ದ ಗೋಕಾಕ ತಾಲೂಕಿನ ಜನತೆ ದಿ.4ರಿಂದ ಲಾಕ್‍ಡೌನ್ ಸಡಿಲಿಕೆಯಿಂದ ತುಸು ನೆಮ್ಮದಿ ಮೂಡಿದೆ.
ಲಾಕ್‍ಡೌನ್ ಸಡಿಲಿಕೆಯಿಂದ ಗೋಕಾಕ ನಗರದಲ್ಲಿ ಒಳ ಬರುವ ಹಾಗೂ ಹೊರ ಹೋಗುವ ಒಳ ರಸ್ತೆಗಳಿಗೆ ಹಾಕಲಾದ ಬ್ಯಾರಿಕೇಡ್‍ಗಳನ್ನು ತೆಗೆಯಲಾಗಿದೆ. ಮದ್ಯದಂಗಡಿಗಳಿಗೆ ತೆರೆಯಲು ಅನುಮತಿ ನೀಡಿದ್ದರಿಂದ ಮದ್ಯಪ್ರಿಯರು ಹರ್ಷಗೊಂಡಿದ್ದು, ಮದ್ಯದಂಗಡಿ ಮಾಲೀಕರು ಮದ್ಯ ಮಾರಾಟ ಮಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಮಾರಾಟದ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಲಾಕ್‍ಡೌನ್ ಸಡಿಲಿಕೆಯ ಸಂಬಂಧವಾಗಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರನ್ನು ಪ್ರಶ್ನಿಸಿದಾಗ ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಲಾಕ್‍ಡೌನ್ ಸಡಿಲಿಕೆ ಸಂಪೂರ್ಣ ವಿವರಗಳನ್ನು ನಂತರ ತಿಳಿಸಲಾಗುವುದು ಎಂದರು.
ಗೋಕಾಕ ತಾಲೂಕಿನಲ್ಲಿ ಹೊರರಾಜ್ಯಗಳಿಂದ ದುಡಿಯಲು ಬಂದ ಜನರ ವಿವರವನ್ನು ಪತ್ರಕರ್ತರು ಕೇಳಿದಾಗ ಸಾಕಷ್ಟು ಜನರು ಬೇರೆ ರಾಜ್ಯಗಳಿಂದ ಬಂದ ಜನರು ಇದ್ದಾರೆ. ಅವರು ತಮ್ಮ ಸ್ವಸ್ಥಾನಗಳಿಗೆ ಹೋಗಲು ಇಚ್ಛಿಸಿದರೆ ಅವರು ಪ್ರತ್ಯೇಕ ವಿವರಗಳನ್ನೊಳಗೊಂಡ ಅರ್ಜಿಯನ್ನು ಸಲ್ಲಿಸಿದರೆ ಅದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿ ಅವರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲದಾರ ಅವರು ಹೇಳಿದರು.