RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ತಪಸಿ ಶಾಲೆಯ ಪ್ರಕರಣ ಅರವಿಂದ ದಳವಾಯಿ ಆರೋಪ ಸತ್ಯಕ್ಕೆ ದೂರ : ಗ್ರಾಮಸ್ಥರ ಹೇಳಿಕೆ

ಗೋಕಾಕ:ತಪಸಿ ಶಾಲೆಯ ಪ್ರಕರಣ ಅರವಿಂದ ದಳವಾಯಿ ಆರೋಪ ಸತ್ಯಕ್ಕೆ ದೂರ : ಗ್ರಾಮಸ್ಥರ ಹೇಳಿಕೆ 

ತಪಸಿ ಶಾಲೆಯ ಪ್ರಕರಣ ಅರವಿಂದ ದಳವಾಯಿ ಆರೋಪ ಸತ್ಯಕ್ಕೆ ದೂರ : ಗ್ರಾಮಸ್ಥರ ಹೇಳಿಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 9 :

 

 

ತಾಲೂಕಿನ ತಪಸಿ ಗ್ರಾಮದಲ್ಲಿನ ಗೋಮಾಳದ ಕುರಿತಂತೆ ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಗ್ರಾಮದ ಮುತ್ತೆಪ್ಪ ಮನ್ನಾಪೂರ, ರಾಯಪ್ಪ ತಿರಕನ್ನವರ, ಲಕ್ಷ್ಮಣ ಯಳ್ಳೂರ, ವಾಸು ಗಲಗಲಿ ಅವರು ತಿಳಿಸಿದ್ದಾರೆ.
ಸರ್ಕಾರಿ ಗೋಮಾಳ ಜಮೀನಿನಲ್ಲಿ 10 ಎಕರೆ ಜಮೀನನ್ನು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಕಟ್ಟಡಕ್ಕೆ ಎರಡು ವರ್ಷಗಳ ಹಿಂದೆಯೇ ಸರ್ಕಾರ ಮಂಜೂರಾತಿ ನೀಡಿದೆ. ಕಟ್ಟಡದ ಅಭಾವದಿಂದಾಗಿ ತಪಸಿ ಶಾಲೆಯನ್ನು 2 ವರ್ಷ ಕೌಜಲಗಿಯಲ್ಲಿ ಮತ್ತು ಪ್ರಸ್ತುತ ಒಂದು ವರ್ಷದಿಂದ ಗೋಕಾಕದಲ್ಲಿ ನಡೆಸಲಾಗುತ್ತಿದೆ. ಶಾಲೆಗೆ ಮಂಜೂರಾದ 10 ಎಕರೆ ಗೋಮಾಳ ಜಮೀನಿನಲ್ಲಿ ಅನಧೀಕೃತವಾಗಿ ಕೆಲ ಕುಟುಂಬಗಳು ಗುಡಿಸಲು ಹಾಗೂ ಶೆಡ್‍ಗಳನ್ನು ನಿರ್ಮಿಸಿದ್ದಾರೆ. ಅಂತಹ ಅನಧೀಕೃತವಾಗಿ ವಾಸವಿರುವ 28 ಕುಟುಂಬಗಳಿಗೆ ಅದರಲ್ಲೂ ಕೇವಲ 5 ಕುಟುಂಬಗಳು ಮಾತ್ರ ನಿವೇಶನ ರಹಿತರಾಗಿದ್ದಾರೆ. ಉಳಿದವರು ಅನುಕೂಲಸ್ಥರು, ಜಮೀನು ಹೊಂದಿದವರು ಬೇರೆ-ಬೇರೆ ಕಡೆಗೆ ಮನೆಗಳನ್ನು ಹೊಂದಿದವರಾಗಿದ್ದಾರೆ. ಆದರೂ ಸಹಿತ ಈ 28 ಕುಟುಂಬಗಳಿಗೆ ಬೇರೆ ಕಡೆಗೆ ನಿವೇಶನ ನೀಡಿ ವಸತಿ ಸೌಲಭ್ಯವನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರೂ ಸಹಿತ ಕೆಲವು ಜನರ ಕುಮ್ಮಕ್ಕಿನಿಂದ ಶಾಲಾ ಕಟ್ಟಡಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.
ತಪಸಿ ಗ್ರಾಮಕ್ಕೆ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಮಂಜೂರು ಮಾಡಿಸಲಾಗಿದೆ. ಇದು ನಮ್ಮ ಗ್ರಾಮಕ್ಕೆ ಸಂದ ಗೌರವವೆಂದು ಹೇಳಬೇಕಾಗಿದೆ. ಇದಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾಕಷ್ಟು ಶ್ರಮವಹಿಸಿ ತಪಸಿ ಗ್ರಾಮಕ್ಕೆ ವಸತಿ ಶಾಲೆಯನ್ನು ಆರಂಭಿಸಿದ್ದಾರೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನವನ್ನು ಸಹ ಮಂಜೂರು ಮಾಡಿಸಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
ಇತ್ತೀಚೆಗೆ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನೂ ಕೂಡ ನಡೆಸಲಾಗಿದೆ. ಆದರೆ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಸಹಿಸದೇ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕಾಂಗ್ರೇಸ್ ಮುಖಂಡರೊಬ್ಬರು ಗೋಮಾಳ ಜಾಗೆಯಲ್ಲಿ ವಸತಿ ಶಾಲೆಯ ಕಟ್ಟಡ ನಿರ್ಮಾಣವಾಗಬಾರದು ಎಂಬ ದುರುದ್ಧೇಶದಿಂದ ಕೆಲವು ಪಟ್ಟಬದ್ಧ ಹಿತಾಸಕ್ತಿಗಳೊಂದಿಗೆ ಕೂಡಿಕೊಂಡು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಈ ವಸತಿ ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಪ್ರವೇಶ ಕಾಯ್ದಿರಿಸಲು ಸುವರ್ಣಾವಕಾಶ ನಮಗಿದೆ. ಇದನ್ನು ಅರ್ಥ ಮಾಡಿಕೊಳ್ಳದೇ ವಿನಾಕಾರಣ ಪತ್ರಿಕೆಗಳ ಮೂಲಕ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ರಾಜಕೀಯ ದುರುದ್ಧೇಶದಿಂದ ಕೆಲವರನ್ನು ಬಳಸಿಕೊಂಡು ಗೋಮಾಳ ಜಾಗೆಯಲ್ಲಿ ಯಾವುದೇ ಕಾರಣಕ್ಕೂ ವಸತಿ ಶಾಲೆ ನಿರ್ಮಾಣವಾಗಬಾರದು ಎಂದು ಪಟ್ಟು ಹಿಡಿದಿರುವ ಕಾಂಗ್ರೇಸ್ ಮುಖಂಡರೊಬ್ಬರು ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಏಳ್ಗೆ ಸಹಿಸದೇ ನಿರುದ್ಯೋಗಿ ರಾಜಕಾರಣಿಯಾಗಿರುವ ಇಂತಹವರು ಈ ಕೀಳು ಮಟ್ಟಕ್ಕೆ ಇಳಿಯುತ್ತಾರೆಂದು ಭಾವಿಸಿರಲಿಲ್ಲ. ಶಿಕ್ಷಣದಲ್ಲೂ ರಾಜಕೀಯ ಬೆರೆಸುತ್ತಿರುವ ಇಂತಹವರ ನಡೆ ನಿಜಕ್ಕೂ ನಾಚಿಕೆಗೇಡು. ಇನ್ನು ಚುನಾವಣೆ ವಿಷಯಕ್ಕೆ ಬಂದರೆ ಕಾಂಗ್ರೇಸ್ ಪಕ್ಷ ಇಲ್ಲಿ ಮುನ್ನಡೆ ಸಾಧಿಸಿಲ್ಲ. ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ತಪಸಿ ಗ್ರಾಮದಲ್ಲಿ ಬಿಜೆಪಿಗೆ 613 ಮತಗಳು ಬಿದ್ದರೇ ಕಾಂಗ್ರೇಸ್‍ಗೆ 372 ಮತಗಳು ಬಿದ್ದಿವೆ. ಇಲ್ಲಿಯೂ ಬಿಜೆಪಿ ಮುನ್ನಡೆಯಲ್ಲಿದೆ. 2019 ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೇಸ್ ಸಂಪೂರ್ಣವಾಗಿ ನೆಲಕಚ್ಚಿದೆ. ವಸ್ತುಸ್ಥಿತಿ ಹೀಗಿರುವಾಗ ಯಾವ ಆಧಾರವನ್ನಿಟ್ಟುಕೊಂಡು ಇಂತಹ ಬಾಲೀಶತನದ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇನ್ನಾದರೂ ವಾಸ್ತವ ಸ್ಥಿತಿ ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳ ಪಾಲಿಗೆ ಶತ್ರು ಆಗದೇ ಅವರ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಕೆಲಸ ಮಾಡಲಿ ಎಂದು ಅರವಿಂದ ದಳವಾಯಿಗೆ ಗ್ರಾಮಸ್ಥರು ಬುದ್ಧಿಪಾಠ ಹೇಳಿದ್ದಾರೆ.
ನಾಗಪ್ಪ ಗಲಗಲಿ, ಶಿವಪುತ್ರ ದಾಬೋಜಿ, ಮಹಾಂತೇಶ ಕಂಬಾರ, ಕಂಬಣ್ಣಾ ಯಳ್ಳೂರ, ಸಿದ್ದಪ್ಪ ಸುಳ್ಳನವರ, ಹನಮಂತ ಪೂಜೇರಿ, ಗುರುನಾಥ ಪೊಲೀಸನವರ, ಗುರುನಾಥ ದಳವಾಯಿ, ರವಿ ಗಲಗಲಿ, ಭೀಮಶಿ ಯಳ್ಳೂರ ಮುಂತಾದವರು ಅರವಿಂದ ದಳವಾಯಿ ಅವರ ರಾಜಕೀಯ ಪ್ರೇರಿತ ಹೇಳಿಕೆಯನ್ನು ಖಂಡಿಸಿದ್ದಾರೆ.

Related posts: