ಗೋಕಾಕ:ಅಪಾಯಮಟ್ಟದಲ್ಲಿ ಹರಿಯುತ್ತಿರು ನದಿಗಳು : ಲೋಳಸೂರ ಸೇತುವೆ ಸಂಚಾರ ಕಡಿತ
ಅಪಾಯಮಟ್ಟದಲ್ಲಿ ಹರಿಯುತ್ತಿರು ನದಿಗಳು : ಲೋಳಸೂರ ಸೇತುವೆ ಸಂಚಾರ ಕಡಿತ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 18 :
ನಗರ ಸೇರಿದಂತೆ ತಾಲೂಕಿನಾದ್ಯಂತ ಕೋರೋನಾ ಭೀತಿ ಒಂದೆಡೆಯಾದರೇ ಪ್ರವಾಹದ ಭೀತಿ ಮತ್ತೊಂದೆಡೆಯಾಗಿ ಜನ ಭಯಭೀತರಾಗಿ ತತ್ತರಿಸುತ್ತಿದ್ದಾರೆ. ಕಳೆದ ವರ್ಷದ ಎಂದು ಕಂಡರಿಯದ ಪ್ರವಾಹದ ಕಹಿ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ನೆರೆ ಅಪ್ಪಳಿಸುತ್ತಿರುವುದು ಜನರನ್ನು ಇನ್ನಷ್ಟು ಸಂಕಷ್ಟಕ್ಕೆದೂಡುತ್ತಿದೆ.
ಮಹಾರಾಷ್ಟ್ರ ರಾಜ್ಯದ ಗಡಿಭಾಗದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ. ರವಿವಾರದಂದು ರಾತ್ರಿ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ 40ಸಾವಿರ ಕ್ಯೂಸೆಕ್ಸ್, ಹಿರಣ್ಯಕೇಶಿ 20 ಸಾವಿರ ಕ್ಯೂಸೆಕ್ಸ್, ಬಳ್ಳಾರಿ ನಾಲಾದಿಂದ 10ಸಾವಿರ, ಹಾಗೂ ಮಾರ್ಕೇಂಡೆಯ ನದಿಯಿಂದ 12 ಸಾವಿರ ಕ್ಯೂಸೆಕ್ಸ್ ನೀರು ಬಂದಿದ್ದರಿಂದ ಸೋಮವಾರದಂದು ಮುಂಜಾನೆಯಿಂದಲೇ ನಗರದ ಹೊರವಲಯದ ಲೋಳಸೂರು ಸೇತುವೆ ಸಂಚಾರ ಬಂದಾಗಿದೆ. ಇದರಿಂದ ಸಂಕೇಶ್ವರ-ನರಗುಂದ ರಾಜ್ಯ ಹೆದ್ದಾರಿಯ ಮೇಲೆ ಸಂಚಾರ ಸ್ಥಗಿತಗೊಂಡಿದೆ.
ಅಲ್ಲದೇ ಸೋಮವಾರದಂದು ಮುಂಜಾನೆ ಮತ್ತೇ ಹಿಡಕಲ್ ಜಲಾಶಯದಿಂದ 31 ಸಾವಿರ, ಶಿರೂರ ಜಲಾಶಯದಿಂದ 8500, ಬಳ್ಳಾರಿ ನಾಲಾದಿಂದ 13 ಸಾವಿರ, ಹಿರಣ್ಯಕೇಶಿ ನದಿಯಿಂದ 17 ಸಾವಿರ ಒಟ್ಟಾರೆಯಾಗಿ 71 ಸಾವಿರ ಕ್ಯೂಸೆಕ್ಸ್ ನೀರು ಘಟಪ್ರಭಾ ನದಿಗೆ ಹರಿದು ಬಂದಿರುವುದರಿಂದ ನಗರದ ಹಳೆಯ ದನದ ಪೇಟೆ, ದಾಳಂಬರಿ ತೋಟ, ಡೋಹರ ಗಲ್ಲಿ, ಬೋಜಗಾರ ಗಲ್ಲಿ ಉಪ್ಪಾರ ಗಲ್ಲಿಗಳ ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಸಾರ್ವಜನಿಕರು ತಮಗೆ ಬೇಕಾದ ಅಗತ್ಯ ವಸ್ತುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ದೃಶಗಳ ಸಾಮಾನ್ಯವಾಗಿತ್ತು. ಮುಸ್ಲಿಂ ಸಮುದಾಯದ ಸ್ಮಶಾನಕ್ಕೆ ನೀರು ನುಗ್ಗಿ ಅಂತ್ಯಕ್ರೀಯೆ ನಡೆಸಲು ಸ್ಥಳವೇ ಇಲ್ಲದಂತಾಗಿದೆ. ಇದೇ ರೀತಿ ಇನ್ನೂ ಪ್ರವಾಹ ಹೆಚ್ಚಾದರೇ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕೋಳಿ ಸೇತುವೆ ಕೂಡಾ ಸಂಚಾರ ಬಂದ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.