ಗೋಕಾಕ:ತಾಲೂಕಾಡಳಿತ ನಿರ್ಲಕ್ಷ್ಯ : ನೆರೆ ಸಂತ್ರಸ್ತರ ಆರೋಪ
ತಾಲೂಕಾಡಳಿತ ನಿರ್ಲಕ್ಷ್ಯ : ನೆರೆ ಸಂತ್ರಸ್ತರ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 18 :
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಗೋಕಾಕ ನಗರದ ಉಪ್ಪಾರ ಗಲ್ಲಿ, ಕುಂಬಾರ ಗಲ್ಲಿ, ಹಾಳಬಾಗ ಗಲ್ಲಿ, ಹಳೆಯ ದನದ ಪೇಠೆ, ಮಟನ್ ಮಾರ್ಕೆಟ್, ದಾಳಂಬರಿ ತೋಟ ಸೇರಿದಂತೆ ಭಾಗಶಃ ಗಲ್ಲಿಗಳಲ್ಲಿ ನೀರು ನುಗ್ಗಿದ್ದು, ನಗರದ ಕೆಲ ಮುಳುಗಡೆ ಪ್ರದೇಶದ ನಿರಾಶ್ರಿತರು ಮತ್ತು ತಾಲೂಕಿನ ಚಿಗಡೊಳ್ಳಿ, ಅಡಿಬಟ್ಟಿ ಗ್ರಾಮದ ಕೆಲವು ಸಂತ್ರಸ್ತರು ದನ-ಕರುಗಳ ಸಮೇತವಾಗಿ ನಗರದ ಹೊರ ವಲಯ ಎಪಿಎಂಸಿ ಆವರಣದಲ್ಲಿ ತೆರೆಯಲಾದ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ತಾಲೂಕಾಡಳಿತದಿಂದ ಸರಿಯಾದ ವ್ಯವಸ್ಥೆ ಮಾಡಿರುವದಿಲ್ಲ ಎಂದು ಎಪಿಎಂಸಿಯ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ನಿರಾಶ್ರಿತರು ಆರೋಪಿವಾಗಿದೆ. ಸೋಮವಾರ ರಾತ್ರಿಯೇ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದರು ಸಹ ಮರುದಿನ ಮುಂಜಾನೆಯವರೆಗೆ ಸಂತ್ರಸ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲಾ, ಊಟ-ಉಪಾಹಾರದ ವ್ಯವಸ್ಥೆಯು ಮಾಡಿಲ್ಲ. ದನ-ಕರುಗಳಿಗೆ ಮೇವು ನೀಡಿಲ್ಲಾ ನಾವು ಬೇರೆಯವರ ಹತ್ತಿರ ಮೇವನ್ನು ಬೇಡಿ ತಂದಿದ್ದೇವೆ ಅಧಿಕಾರಿಗಳು ನಮ್ಮ ಕಡೆ ಕಣ್ಣೆತ್ತಿ ನೋಡುತ್ತಿಲ್ಲ ಎಂದು ನಿರಾಶ್ರಿತರು ಆರೋಪಿಸಿದ್ದಾರೆ.
ಸಂತ್ರಸ್ತನೊಂದಿಗೆ ಮಾತನಾಡಿದ ತಹಶೀಲದಾರ ಆಡಿಯೋ ವೈರಲ್: ಇಲ್ಲಿಯ ಎಪಿಎಂಸಿ ಆವರಣದ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರೊಬ್ಬರು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಪೋನ ಮಾಡಿ ಪರಿಹಾರ ಕೇಂದ್ರದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಕೋರಿ ವಿನಂತಿಸಿದ್ದಾರೆ. ಇದಕ್ಕೆ ಪೂರಕವಾಗಿ ಉತ್ತರ ನೀಡಿದ ತಹಶೀಲದಾರ ಅವರು ನೀರಿನ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಸಂತ್ರಸ್ತ ತಾವು ರಾತ್ರಿಯಿಂದ ಇಲ್ಲಿ ಬಂದು ಆಶ್ರಯ ಪಡೆದಿದ್ದು, ರಾತ್ರಿಯಿಂದ ಇಲ್ಲಿಯವರೆಗೆ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಒತ್ತಿ ಹೇಳಿದಾಗ ರೊಚ್ಚಿಗೆದ್ದ ತಹಶೀಲದಾರ ಅವರು ಸಂತ್ರಸ್ತನಿಗೆ ನೀನೇನು ಬೀಗರ ಮನೆಗೆ ಬಂದಿದ್ದಿಯಾ ಎಂದು ಪ್ರಶ್ನೆ ಮಾಡಿ, ಆವಾಜ ಹಾಕಿ ಗೇರೆ ಕೊರೆದು ಮಾತನಾಡ ಬೇಡ ಕೂಡಲೇ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ಮರು ಪ್ರಶ್ನೆ ಮಾಡಿದ ಸಂತ್ರಸ್ತ ನಮಗೆ ಬೀಗರ ಮನೆ ಇದ್ದರೇ ನಾವೇಕೆ ಇಲ್ಲಿಗೆ ಬರುತ್ತಿದ್ವಿ ಎನ್ನುವ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ ಆಗಿದೆ. ತಹಶೀಲದಾರ ಅವರ ನಡೆಗೆ ತೀವೃ ಆಕ್ರೋಶ ವ್ಯಕ್ತವಾಗುತ್ತಿದೆ.
ಪರಿಹಾರ ಕೇಂದ್ರದ ಮುಂದೆ ಕೆಸರು: ಎಪಿಎಂಸಿಯಲ್ಲಿ ತೆರೆಯಲಾದ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸುಮಾರು 100ಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಹೀಗೆ ಆಶ್ರಯ ಪಡೆದಿರುವ ನಿರಾಶ್ರಿತರ ಕೇಂದ್ರಕ್ಕೆ ತಲುಪುವ ದಾರಿಯುದ್ದಕ್ಕೂ ಕೆಸರು ರಾಡಿ ಮಣ್ಣಿನಿಂದ ತುಂಬಿ ನೆರೆ ಸಂತ್ರಸ್ತರು ಪರದಾಡುವಂತಾಗಿದೆ. ಮಕ್ಕಳು ವಯಸ್ಸಾವರು ಇಲ್ಲಿ ನಡೆದಾಡಲು ಆಗುತ್ತಿಲ್ಲ. ಗಲೀಜುಗಳಿಂದ ತುಂಬಿದೆ. ಇದನ್ನು ಸರಿಪಡಿಸುವಂತೆ ಸಂತ್ರಸ್ತರು ಪೌರಾಯುಕ್ತರಿಗೆ ಪೋನ ಮಾಡಿದರೆ ಅವರು ಹೋಮ-ಕ್ವಾರಟೈನಲ್ಲಿದ್ದೇನೆ ಸಿಬ್ಬಂದಿಗಳಿಗೆ ಕಳುಹಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ ಎಂದು ನಿರಾಶ್ರಿತರು ಆರೋಪಿಸಿದ್ದಾರೆ.