ಗೋಕಾಕ:ವಿದ್ಯಾರ್ಥಿಗಳು ಸಾಧನೆಗೈದು ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕು : ಬಿಇಒ ಜಿ.ಬಿ.ಬಳಗಾರ
ವಿದ್ಯಾರ್ಥಿಗಳು ಸಾಧನೆಗೈದು ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕು : ಬಿಇಒ ಜಿ.ಬಿ.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 20 :
ವಿದ್ಯಾರ್ಥಿಗಳು ತಮ್ಮಲ್ಲಿರುವ ಅಧ್ಬುತ ಶಕ್ತಿಯಿಂದ ಪಾಲಕರ ಸಹಕಾರ, ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾಗಿ ಸಾಧನೆಗೈದು ನಾಡಿನ ಕೀರ್ತಿಯನ್ನು ಹೆಚ್ಚಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ರವಿವಾರದಂದು ನಗರದ ಸಮುದಾಯ ಭವನದಲ್ಲಿ ಇಲ್ಲಿಯ ಜೆಸಿಐ ಸಂಸ್ಥೆಯವರು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳೇ ನಿಮಗೆ ನೀವೇ ನಾಯಕರಾಗಿದ್ದು, ಅದನ್ನು ಅರ್ಥೈಸಿಕೊಂಡು ತಮ್ಮಲ್ಲಿರುವ ಸಾಮಥ್ರ್ಯದಿಂದ ಬದುಕನ್ನು ಕಟ್ಟಿಕೊಳ್ಳಿ, ಕೋರೋನಾ ಸಂಕಷ್ಟದ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದರಿ, ಮುಂದಿನ ವ್ಯಾಸಂಗದಲ್ಲಿಯೂ ಸತತ ಪ್ರಯತ್ನದಿಂದ ಉನ್ನತ ಹುದ್ದೆ ಅಲಂಕರಿಸಿ. ಇದಕ್ಕೆ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಅವುಗಳ ಸದುಪಯೋಗದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿರೆಂದು ಹಾರೈಸಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಪಡೆದು, ಒಳ್ಳೆಯ ನಾಗರೀಕರಾಗಿ ಸಮಾಜಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡಿ ಎಂದ ಅವರು ಜೆಸಿಐ ಸಂಸ್ಥೆ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆಯುತ್ತಿರುವುದು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದ್ದು, ತಾವು ಕೂಡಾ ಶ್ರೀಮಠದಿಂದ ಹಲವು ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಭವಿಷ್ಯ ನಿರ್ಮಾಣಕ್ಕೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಜನಿಕಾಂತ ಮಾಳೋದೆ ವಹಿಸಿದ್ದರು. ವೇದಿಕೆ ಮೇಲೆ ಪೌರಾಯುಕ್ತ ಶಿವಾನಂದ ಹಿರೇಮಠ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ, ಪಿಎಸ್‍ಆಯ್ ಎ.ಟಿ.ಅಮ್ಮೀನಭಾಂವಿ, ಜೆಸಿಐ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ವಲಯ ನಿರ್ದೇಶಕ ಕೆಂಪಣ್ಣ ಚಿಂಚಲಿ, ಕಾರ್ಯದರ್ಶಿ ಶೇಖರ ಉಳ್ಳೇಗಡ್ಡಿ, ಎಮ್.ಎಚ್.ಅತ್ತಾರ, ರವಿ ಮಾಲದಿನ್ನಿ, ರೋಟರಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಕಡಕೋಳ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಬೆಲ್ಲದ, ಮೀನಾಕ್ಷಿ ಸವದಿ, ಮನಿಷಾ ಮಾಳೋದೆ, ನೇತ್ರಾವತಿ ಲಾತೂರ, ಸುಮಾ ಮದಿಹಳ್ಳಿ, ಹೇಮಾ ಅಮ್ಮಣಗಿ ಇದ್ದರು.
ರಾಚಪ್ಪ ಅಮ್ಮಣಗಿ ಸ್ವಾಗತಿಸಿದರು, ಮಲ್ಲಪ್ಪ ಮದಿಹಳ್ಳಿ ನಿರೂಪಿಸಿದರು, ಮಹಾಂತೇಶ ವಾಲಿ ವಂದಿಸಿದರು.