RNI NO. KARKAN/2006/27779|Saturday, December 14, 2024
You are here: Home » breaking news » ಮೂಡಲಗಿ:ಮೂಡಲಗಿ ಪುರಸಭೆ ಜೆಡಿಎಸ್ ಸದಸ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕಚೇರಿಗಳ ಆರಂಭಕ್ಕೆ ಒತ್ತಾಯಿಸಿ ಮನವಿ ಅರ್ಪಣೆ

ಮೂಡಲಗಿ:ಮೂಡಲಗಿ ಪುರಸಭೆ ಜೆಡಿಎಸ್ ಸದಸ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕಚೇರಿಗಳ ಆರಂಭಕ್ಕೆ ಒತ್ತಾಯಿಸಿ ಮನವಿ ಅರ್ಪಣೆ 

ಮೂಡಲಗಿ ಪುರಸಭೆ ಜೆಡಿಎಸ್ ಸದಸ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕಚೇರಿಗಳ ಆರಂಭಕ್ಕೆ ಒತ್ತಾಯಿಸಿ ಮನವಿ ಅರ್ಪಣೆ
ಮೂಡಲಗಿ ತಾಲೂಕಿಗೆ ಜನೇವರಿ ಅಂತ್ಯದೊಳಗೆ ಸರ್ಕಾರಿ ಕಚೇರಿಗಳ ಕಾರ್ಯಾರಂಭ-ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ.
ಮೂಡಲಗಿ ಅ 28 : ಮೂಡಲಗಿ ಹೊಸ ತಾಲೂಕಿಗೆ ಆಡಳಿತಾತ್ಮಕ ದೃಷ್ಟಿಯಿಂದ ಅಗತ್ಯವಿರುವ ಎಲ್ಲ ಸರಕಾರಿ ಕಛೇರಿಗಳನ್ನು ಆರಂಭಿಸುವಂತೆ ಒತ್ತಾಯಿಸಿ ಇಲ್ಲಿಯ ಜೆಡಿಎಸ್ ಪಕ್ಷದ ಪುರಸಭೆ ಸದಸ್ಯರುಗಳು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು.
ಬುಧವಾರದಂದು ಬೆಳಗಾವಿಯ ಖಾಸಗಿ ಹೊಟೇಲ್‍ನಲ್ಲಿ ಪುರಸಭೆಯ ಸದಸ್ಯ ಈರಣ್ಣಾ ಕೊಣ್ಣೂರ ನೇತೃತ್ವದ ಜೆಡಿಎಸ್ ಸದಸ್ಯರುಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮೂಡಲಗಿ ಹೊಸ ತಾಲೂಕಾಗಿ 20 ತಿಂಗಳು ಗತಿಸಿದರೂ ಅಗತ್ಯವಿರುವ ಸರಕಾರಿ ಕಛೇರಿಗಳಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ತಹಶೀಲ್ದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗಳು ಮಾತ್ರ ಕಾರ್ಯಾರಂಭಗೊಂಡಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವಿರುವ ಸರ್ಕಾರಿ ಕಛೇರಿಗಳನ್ನು ಪ್ರಾರಂಭಿಸಲು ಶಾಸಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಬೇಕು. ಮೂಡಲಗಿ ಭಾಗದ ಸಾರ್ವಜನಿಕರ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿ ಕಾರ್ಯಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಸದಸ್ಯರು ಶಾಸಕರಿಗೆ ನೀಡಿರುವ ಮನವಿ ಪತ್ರದಲ್ಲಿ ಕೋರಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಜನೇವರಿ ಅಂತ್ಯದೊಳಗೆ ಮೂಡಲಗಿ ಹೊಸ ತಾಲೂಕಿಗೆ ಅಗತ್ಯವಿರುವ ಸರಕಾರಿ ಕಛೇರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಈ ಸಂಬಂಧ ಸಾಕಷ್ಟು ಬಾರಿ ಭೇಟಿ ಮಾಡಿ ಕೋರಿದ್ದೇನೆ. ಸಾರ್ವಜನಿಕರ ಅನುಕೂಲಕ್ಕಾಗಿ ಸರಕಾರಿ ಕಛೇರಿಗಳ ಕಾರ್ಯಾರಂಭಕ್ಕೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ಮೂಡಲಗಿ ಪುರಸಭೆಯಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ. ಅಕ್ಟೋಬರ್ 23 ರಂದು ನಡೆದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾರ್ವಜನಿಕರು ಮತ್ತು ಪಟ್ಟಣದ ಅಭಿವೃದ್ಧಿಗಾಗಿ ಅಧ್ಯಕ್ಷ ಸ್ಥಾನವನ್ನು ನಮ್ಮಲ್ಲಿ(ಬಿಜೆಪಿ) ಉಳಿಸಿಕೊಂಡಿದ್ದು, ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್‍ನವರಿಗೆ ಬಿಟ್ಟುಕೊಡಲಾಗಿದೆ. ಬಿಜೆಪಿ-ಜೆಡಿಎಸ್ ಸದಸ್ಯರ ಸಮನ್ವಯತೆಯಿಂದ ಪಟ್ಟಣದ ಅಭಿವೃದ್ಧಿಗೆ ಕ್ರಿಯಾಯೋಜನೆಯನ್ನು ಇಷ್ಟರಲ್ಲಿಯೇ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಶಾಸಕರ ಹೃದಯ ವೈಶಾಲ್ಯತೆಗೆ ಜೆಡಿಎಸ್ ಸದಸ್ಯರು ಫೀದಾ: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಜೆಡಿಎಸ್ ಪಕ್ಷದ ಸದಸ್ಯರು ಸತ್ಕರಿಸಿದರು. ಮೂಡಲಗಿ ಪುರಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ, ಅಭಿವೃದ್ಧಿ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಶಾಸಕರನ್ನು ಇದೇ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಮೂಡಲಗಿ ಪಟ್ಟಣದಲ್ಲಿ ನಿರೀಕ್ಷೆ ಮಾಡಿದಷ್ಟು ಇಲ್ಲಿಯ ವರೆಗೂ ಅಭಿವೃದ್ದಿ ಕಂಡಿಲ್ಲ, ಮುಂದಿನ ದಿನಗಳಲ್ಲಿ ಶಾಸಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಕಾರ್ಯ ಕೈಗೊಳ್ಳಬೇಕು. ಪ್ರಗತಿಪರ ಕಾರ್ಯಗಳಿಗೆ ಶಾಸಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಪಕ್ಷ ಬೇಧ ಮರೆತು ಸಹಕಾರ ನೀಡುತ್ತೇವೆ. ನಮ್ಮ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ನೀಡಿರುವುದು ಶಾಸಕರ ಕಾರ್ಯವನ್ನು ಶ್ಲಾಘಿಸುತ್ತೇವೆ. ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಪ್ರತಿ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ, ಸೋಂಕಿತರಿಗೆ ದಿನಬಳಕೆ ಮತ್ತು ಮೆಡಿಕಲ್ ಕಿಟ್, ಕ್ಷೇತ್ರದ ಜನತೆಗೆ ಎರಡೆರಡು ಬಾರಿ ಸುಮಾರು 6ಲಕ್ಷ ಮಾಸ್ಕ್‍ಗಳ ವಿತರಣೆ, ಕೊರೋನಾ ವಾರಿಯರ್ಸ್‍ಗೆ ಸಹಾಯಧನ, ಕೋವಿಡ್ ಕೇರ್ ಸೆಂಟರ್‍ಗಳಿಗೆ ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಔಷಧೋಪಚಾರ ನೀಡಿ ಸೋಂಕಿತರ ಆರೈಕೆಗಾಗಿ ಸಾಕಷ್ಟು ಕಾಳಜಿ ವಹಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಾಮಾಜಿಕ ಕಳಕಳಿಯನ್ನು ಈರಣ್ಣ ಕೊಣ್ಣೂರ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಜೆಡಿಎಸ್ ಸದಸ್ಯರಾದ ಈರಣ್ಣಾ ಕೊಣ್ಣೂರ, ಪಾರ್ವತ್ತೆವ್ವ ಅಥಣಿ, ಪರಪ್ಪ ಮುನ್ಯಾಳ, ಮಲ್ಲಪ್ಪ ತೇರದಾಳ, ಶಿವು ಸಣ್ಣಕ್ಕಿ, ಶಾಂತವ್ವ ಝಂಡೇಕುರುಬರ, ಆದಂ ತಾಂಬೋಳಿ, ಸತ್ತೆವ್ವ ಅರಮನಿ, ಬಿಜೆಪಿ ಸದಸ್ಯರಾದ ರವಿ ಸಣ್ಣಕ್ಕಿ, ಜಯಾನಂದ ಪಾಟೀಲ, ಅಬ್ದುಲ್‍ಗಫಾರ ಡಾಂಗೆ, ಹುಸೇನಸಾಬ ಶೇಖ, ಪ್ರಮುಖರಾದ ಅನ್ವರ ನದಾಫ, ಸಿದ್ಧು ಗಡೇಕರ, ಬಸು ಝಂಡೇರಕುರುಬರ, ನನ್ನುಸಾಬ ಶೇಖ, ಮರೆಪ್ಪ ಮರಿಯಪ್ಪಗೋಳ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Related posts: