ಮೂಡಲಗಿ:ಸಣ್ಣಾಟದ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ಶಾಸಕ ಬಾಲಚಂದ್ರ ಪರವಾಗಿ ಸತ್ಕಾರ
ಸಣ್ಣಾಟದ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ಶಾಸಕ ಬಾಲಚಂದ್ರ ಪರವಾಗಿ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಅ 30 :
ಸಂಗ್ಯಾ-ಬಾಳ್ಯಾ ಸಣ್ಣಾಟದ ಕಲಾವಿದೆ ಅರಭಾವಿಯ ಕೆಂಪವ್ವಾ ಹರಿಜನ ಅವರಿಗೆ ಈ ಬಾರಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿರುವುದು ನಮ್ಮ ನೆಲದ ಹೆಮ್ಮೆಯಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕೆಂಪವ್ವಾ ಅವರು ಬಡ ಕುಟುಂಬದಲ್ಲಿ ಹುಟ್ಟಿ ಬಾಲ್ಯದಿಂದಲೂ ಬಯಲಾಟಗಳ ಪ್ರದರ್ಶನ ಮಾಡುತ್ತ ತಮ್ಮ ಕಲೆಯನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಸುಮಾರು 4 ದಶಕಗಳಿಂದ ಸಣ್ಣಾಟದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಕಲಾವಿದೆಯಾಗಿದ್ದಾರೆ. ಇಂತಹವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ತುಂಬಾ ಖುಷಿಯಾಗಿದೆ. ಈ ಮೂಲಕ ಕೆಂಪವ್ವಾ ಆವರಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಹರ್ಷವಾಗಿದೆ. ಕಲೆ ಉಳಿಯಬೇಕು. ಕಲೆಯನ್ನು ಉಳಿಸಿ ಬೆಳೆಸಬೇಕು. ಅಂದಾಗ ಮಾತ್ರ ಕಲಾವಿದರ ಬದುಕು ಸಾರ್ಥಕವಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೆಂಪವ್ವಾ ಹರಿಜನ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶುಕ್ರವಾರ ಸಂಜೆ ತಾಲೂಕಿನ ಅರಭಾವಿ ಪಟ್ಟಣದ ಬಯಲಾಟ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಶಾಸಕರ ಪರವಾಗಿ ನಾಗಪ್ಪ ಶೇಖರಗೋಳ ಅವರು ಸತ್ಕರಿಸಿದರು.
ನಂತರ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಶಕಗಳಿಂದ ಕೆಂಪವ್ವಾ ಸಣ್ಣಾಟ ಬಯಲಾಟ ಕಲಾವಿದೆಯಾಗಿ ನಾಡಿನ ಮೂಲೆ-ಮೂಲೆಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲಿಯೂ ತಮ್ಮ ಕಲಾ ಪ್ರತಿಭೆಯನ್ನು ಸಾದರಪಡಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಗಪ್ಪ ಶೇಖರಗೋಳ ಅವರು ಕೆಂಪವ್ವಾ ಹರಿಜನ ಅವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸತ್ಕರಿಸಿದರು. ಜೊತೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದ 25 ಸಾವಿರ ರೂ.ಗಳ ನಗದನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತಾ ಕಲಾ ಅಕ್ಯಾಡೆಮಿ ಸದಸ್ಯ ಜಯಾನಂದ ಮಾದರ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಲಕ್ಕಪ್ಪ ಲೋಕುರಿ, ಅರಭಾವಿ ಪಟ್ಟಣ ಪಂಚಾಯತ ಸದಸ್ಯರಾದ ರಮೇಶ ಮಾದರ, ಕುಮಾರ ಪೂಜೇರಿ, ಕಲಾವಿದೆ ಲಕ್ಷ್ಮೀ ಹರಿಜನ, ಸಂಜು ಮಾದರ, ಫಕೀರಪ್ಪ ಹರಿಜನ, ಅಬ್ದುಲ ಮಿರ್ಜಾನಾಯ್ಕ, ಮುಂತಾದವರು ಉಪಸ್ಥಿತರಿದ್ದರು.