RNI NO. KARKAN/2006/27779|Sunday, January 19, 2025
You are here: Home » breaking news » ಗೋಕಾಕ:ಸುಣಧೋಳಿ ಜಡಿಸಿದ್ದೇಶ್ವರ ಮಠದ ಬಿಕ್ಕಟ್ಟನ್ನು ಬಗೆ ಹರಿಸಿದ ಶೂನ್ಯ ಸಂಪಾದನ ಮಠದ ಶ್ರೀಗಳು ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ.

ಗೋಕಾಕ:ಸುಣಧೋಳಿ ಜಡಿಸಿದ್ದೇಶ್ವರ ಮಠದ ಬಿಕ್ಕಟ್ಟನ್ನು ಬಗೆ ಹರಿಸಿದ ಶೂನ್ಯ ಸಂಪಾದನ ಮಠದ ಶ್ರೀಗಳು ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ. 

ಸುಣಧೋಳಿ ಜಡಿಸಿದ್ದೇಶ್ವರ ಮಠದ ಬಿಕ್ಕಟ್ಟನ್ನು ಬಗೆ ಹರಿಸಿದ ಶೂನ್ಯ ಸಂಪಾದನ ಮಠದ ಶ್ರೀಗಳು ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ.

 

 
ಮಠದ ಉನ್ನತಿಗೆ ಮುರುಘರಾಜೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಲಹಾ ಸಮಿತಿ ರಚನೆ.

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 4 :

 

 

ಕಳೆದ ಆರೇಳು ತಿಂಗಳಿನಿಂದ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ಮಠದಲ್ಲಿ ಎರಡು ಗುಂಪುಗಳ ಮಧ್ಯ ಭಿನ್ನಾಭಿಪ್ರಾಯಗಳು ಮೂಡಿದ್ದರಿಂದ ಅಲ್ಲಿನ ಪೀಠಾಧಿಕಾರಿಗಳಿಗೆ ಸೇವೆಯನ್ನು ನಿರ್ವಹಿಸಲು ತೊಂದರೆಯಾಗುತ್ತಿರುವದನ್ನು ಮನಗಂಡು ಗೋಕಾಕ ಶೂನ್ಯ ಸಂಪಾದನಾಮಠದ ಸ್ವಾಮಿಜೀ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರುಗಳು ಮಧ್ಯಸ್ಥಿಕೆ ವಹಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ರಾತ್ರಿ ನಗರದ ಶೂನ್ಯ ಸಂಪಾದನಮಠದಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಭಕ್ತರ ಸಭೆಯಲ್ಲಿ ಮಠದ ಆಸ್ತಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಎಲ್ಲ ಅಧಿಕಾರವನ್ನು ಈಗಿರುವ ಜಡಿಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳಿಗೆ ನೀಡಲು ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ. ಗುಂಪುಗಾರಿಕೆಯಿಂದ ಉಂಟಾದ ಮನಸ್ಥಾಪವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿರುವ ಮುರುಘರಾಜೇಂದ್ರ ಸ್ವಾಮಿಗಳು ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಸಂಧಾನ ಕಾರ್ಯಕ್ಕೆ ಮಠದ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಪಾದನಾ ಮಠದಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಉಭಯ ಗುಂಪುಗಳ ಮಧ್ಯೆ ರಾಜಿ ಸಂಧಾನ ನಡೆದಿದ್ದು, ಸ್ವಾಮಿಜೀ ಮತ್ತು ಶಾಸಕರು ರೂಪಿಸಿದ ಸಂಧಾನ ಸೂತ್ರಗಳಿಗೆ ಶಿವಾನಂದ ಸ್ವಾಮಿಜೀ ಸೇರಿದಂತೆ ಎಲ್ಲ ಭಕ್ತರು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಎರಡೂ ಗುಂಪುಗಳ ಮುಖಂಡರನ್ನು ತಮ್ಮ ಮಠಕ್ಕೆ ಕರೆಯಿಸಿಕೊಂಡ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಸಂಧಾನ ಪ್ರಕ್ರಿಯೆ ಆರಂಭಿಸಿ ಮಾತುಕತೆ ನಡೆಸಿದರು.
ಸಂಧಾನಸೂತ್ರದನ್ವಯ ಮಠದ ಸಂಪೂರ್ಣ ಉಸ್ತುವಾರಿಯನ್ನು ಶಿವಾನಂದ ಮಹಾಸ್ವಾಮಿಗಳು ನೋಡಿಕೊಳ್ಳಲಿದ್ದಾರೆ. ದೇವಸ್ಥಾನದ ಹೆಸರಿನಲ್ಲಿದ್ದ ಟ್ರಸ್ಟ್‍ನ್ನು ರದ್ದು ಪಡಿಸಲು ತಿರ್ಮಾನ ಕೈಗೊಳ್ಳಲಾಗಿದೆ. ದೇಣಿಗೆ ಮತ್ತು ಭಿಕ್ಷಾಟನೆ ರೂಪದಲ್ಲಿ ಬರುವ ಹಣವನ್ನು ಸಹ ಮಠದ ಜೀರ್ಣೋದ್ದಾರ ಕಾರ್ಯಗಳಿಗೆ ಸ್ವಾಮಿಜೀಗಳಿಗೆ ಬಳಸಲು ಅಧಿಕಾರ ನೀಡಲಾಗಿದೆ. ಮಠದ ಹೆಸರಿನಲ್ಲಿರುವ ಆಸ್ತಿ-ಪಾಸ್ತಿಗಳನ್ನು ಯಾರಿಗೂ ಪರಭಾರೆಯನ್ನು ಮಾಡುವ ಹಕ್ಕನ್ನು ನೀಡಿರುವದಿಲ್ಲ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಸಾಮಾನ್ಯ ಸಭೆಯನ್ನು ಕರೆದು ಜಮಾ-ಖರ್ಚು ವೆಚ್ಚಗಳ ವಿವರಗಳನ್ನು ಭಕ್ತರ ಮುಂದಿಡುವಂತೆ ಸ್ವಾಮಿಜೀಗಳಿಗೆ ಸೂಚಿಸಲಾಗಿದೆ. ಟ್ರಸ್ಟ್‍ನ್ನು ರದ್ದು ಮಾಡಿ ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಹೊಸದಾಗಿ 21 ಸದಸ್ಯರನ್ನೊಳಗೊಂಡ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಲಹಾ ಸಮಿತಿಯೊಂದನ್ನು ರಚಿಸಲು ತಿರ್ಮಾನ ಕೈಗೊಳ್ಳಲಾಗಿದೆ.
ಸಂಧಾನ ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಮತ್ತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಸುಣಧೋಳಿ ಜಡಿಸಿದ್ದೇಶ್ವರ ಮಠವು ಪವಾಡಗಳಿಗೆ ಹೆಸರುವಾಸಿಯಾಗಿದೆ. ಜೊತೆಗೆ ಅಭಿವೃದ್ದಿಯೂ ಸಹ ಕಂಡಿದೆ. ಆದರೆ ಈ ಮಠದಲ್ಲಿ ಭಕ್ತರಲ್ಲಿಯೇ ಎರಡು ಗುಂಪುಗಳಾಗಿ ಮಠದ ಏಳ್ಗೆಗೆ ಅಡ್ಡಿಯಾಗಿದೆ. ಇನ್ನೂ ಮುಂದೆ ಮುರುಘರಾಜೇಂದ್ರ ಮಹಾಸ್ವಾಮಿಗಳ ಅಪ್ಪಣೆಯಂತೆ ಎಲ್ಲರೂ ತಮ್ಮ ಮನಸ್ತಾಪಗಳನ್ನು ಮರೆತು ಶ್ರೀಮಠದ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.
ಧಾರ್ಮಿಕ ವಾತಾವರಣದಲ್ಲಿ ಇಂತಹ ಘಟನೆಗಳು ನಡೆಯಬಾರದಿತ್ತು. ಅದೊಂದು ಕೆಟ್ಟ ಘಳಿಗೆಯಾಗಿದೆ. ಅದನ್ನು ಮರೆತು ಇನ್ನು ಮುಂದೆ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಲ್ಲ ಭಕ್ತರು ಒಂದಾಗಿ ಒಗ್ಗಟ್ಟಾಗಿ ನಡೆದುಕೊಳ್ಳಬೇಕು. ಮಠದ ಏಳ್ಗೆಗೆ ನಿಮ್ಮ ಸಹಕಾರ ಇರಬೇಕು. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಎಲ್ಲ ಜನಾಂಗದವರು ಏಕತೆಯಿಂದ ಹೋಗಬೇಕೆಂದು ಭಕ್ತ ಸಮೂಹದಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಡಿಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು, ಬಟಕುರ್ಕಿಯ ಬಸವಲಿಂಗ ಸ್ವಾಮೀಗಳು, ಗಣ್ಯರಾದ ಸಿ.ಎಸ್.ವಾಲಿ, ಗುರುರಾಜ ಪಾಟೀಲ, ಶಿವಲಿಂಗಪ್ಪ ಮದಭಾಂವಿ, ಕಲ್ಲಪ್ಪ ಕಮತಿ, ಚಂದ್ರು ಗಾಣಿಗೇರ, ಮಾರುತಿ ಹೊರಟ್ಟಿ, ರಾಜು ವಾಲಿ, ಆನಂದ ಗಾಣಿಗೇರ, ಈರಪಣ್ಣ ಭಾಗೋಜಿ, ಈರಯ್ಯ ಹಿರೇಮಠ, ಲಕ್ಷ್ಮಣ ಕರಾಳೆ, ಶಿವಕುಮಾರ ಅಂಗಡಿ, ಭೀಮಗೌಡ ಪಾಟೀಲ, ಶ್ರೀಶೈಲ ವಾಲಿ, ಬಸು ಪಾಟೀಲ, ಬಸು ಬಿಗೌಡರ, ಬಸಪ್ಪ ಕರಾಳೆ,ಮಹಾದೇವ ಹಾರೂಗೇರಿ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಸುಪ್ರಸಿದ್ದ ಜಡಿಸಿದ್ದೇಶ್ವರ ಮಠವು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಪ್ರತಿವರ್ಷ ಎಪ್ರೀಲ್ ತಿಂಗಳನಲ್ಲಿ ಹಗ್ಗದ ಸಹಾಯವಿಲ್ಲದೇ ರಥವು ತನ್ನಿಂದ ತಾನೇ ಚಲಿಸುತ್ತಾ ಭಕ್ತರಲ್ಲಿ ಭಕ್ತಿಭಾವವನ್ನು ಹೆಚ್ಚಿಸುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಜಡಿಸಿದ್ದೇಶ್ವರ ಪವಾಡವನ್ನು ನೋಡಲು ಆಗಮಿಸುತ್ತಿರುತ್ತಾರೆ.
ಶ್ರೀಮಠದಲ್ಲಿ ಗುಂಪುಗಾರಿಕೆಯಿಂದ ಮಠದ ಏಳ್ಗೆಗೆ ಹಿನ್ನಡೆಯಾಗುತ್ತಿದ್ದು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಸುಣಧೋಳಿ ಗ್ರಾಮಸ್ಥರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶೂನ್ಯ ಸಂಪಾದನಮಠದ ಶ್ರೀಗಳು ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಧ್ಯಪ್ರವೇಶಿಸಿ ಸಂಧಾನ ಮಾಡುವಲ್ಲಿ ಸಫಲರಾದರು.

Related posts: