ಗೋಕಾಕ:ಕುರುಬರ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗದೇ ಅಭಿವೃದ್ಧಿಯಿಂದ ವಂಚಿತವಾಗಿದೆ : ವಿರೂಪಾಕ್ಷಪ್ಪ
ಕುರುಬರ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗದೇ ಅಭಿವೃದ್ಧಿಯಿಂದ ವಂಚಿತವಾಗಿದೆ : ವಿರೂಪಾಕ್ಷಪ್ಪ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 12 :
ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಗತಿಸಿದರೂ ಕುರುಬರ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗದೇ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಕುರುಬರ ಎಸ್.ಟಿ.ಹೋರಾಟ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಹೇಳಿದರು.
ಗುರುವಾರದಂದು ನಗರದ ಬೀರೇಶ್ವರ ಸಮುದಾಯ ಭವನದಲ್ಲಿ ಕುರುಬರ ಎಸ್.ಟಿ ಹೋರಾಟ ಸಮಿತಿ, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ, ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕುರುಬರ ಸಮಾಜದ ಎಲ್ಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಎಸ್.ಟಿ.ಮೀಸಲಾತಿಗಾಗಿ ಬೆಳಗಾವಿ ವಿಭಾಗ ಮಟ್ಟದ ಸಮಾವೇಶದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೂ ಕುರುಬರ ಸಮಾಜದ ಯಾವುದೇ ಬೇಡಿಕೆಗಳು ಈಡೇರಿರುವುದಿಲ್ಲ. ಇದರಿಂದ ಸಮಾಜದ ಅಭಿವೃದ್ಧಿ ಕುಂಠಿತವಾಗಿದೆ. ಸಮಾಜದ ಅಭಿವೃದ್ಧಿ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕುರುಬರ ಸಮಾಜಕ್ಕೆ ಎಸ್.ಟಿ ಮೀಸಲಾತಿ ನೀಡುವಂತೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಹೋರಾಟ ಸಮಿತಿಯ ಖಜಾಂಚಿ ಹಾಗೂ ಸಚಿವ ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ ಮಾತನಾಡಿ ಸರ್ಕಾರದ ಸೌಲಭ್ಯವನ್ನು ಪಡೆಯಲು ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಪಕ್ಷಾತೀತವಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ಕುರುಬ ಸಮಾಜದ ಬಾಂಧವರು ಸಮಾಜದ ಶ್ರೇಯೋಭಿವೃದ್ಧಿಗೆ ಕೈ ಜೋಡಿಸುವಂತೆ ಕರೆ ನೀಡಿದರು.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ: ರಾಜೇಂದ್ರ ಸಣ್ಣಕ್ಕಿ ಮಾತನಾಡಿ ಇದೇ ದಿ.29ರಂದು ಬಾಗಲಕೋಟೆಯಲ್ಲಿ ಆಯೋಜಿಸಿರುವ ವಿಭಾಗಮಟ್ಟದ ಸಮಾವೇಶದಲ್ಲಿ ಸಮಾಜ ಬಾಂಧವರು ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕುರುಬ ಸಮಾಜ ಬುಡಕಟ್ಟು ಜನಾಂಗವಾಗಿದ್ದು ಕುರಿ ಸಾಕಾಣಿಕೆ ಮೂಲ ಕಸಬು ಆಗಿದೆ. ಶಿಕ್ಷಣ ಹಾಗೂ ರಾಜಕೀಯದಿಂದ ವಂಚಿತವಾಗಿದ್ದು ಅಭಿವೃದ್ದಿಯಾಗಿಲ್ಲ.ಇಂದು ಸಮಾಜದ ಎಲ್ಲ ಮುಖಂಡರು ಪಕ್ಷಾತೀತವಾಗಿ ಕಾಗಿನೆಲೆ ಸಂಸ್ಥಾನದ ಜಗದ್ಗುರು ಹಾಗೂ ಶಾಖಾ ಮಠದ ಶ್ರೀಗಳ ನೇತ್ರತ್ವದಲ್ಲಿ ಎಸ್.ಟಿ.ಮೀಸಲಾತಿಗಾಗಿ ಹೋರಾಟ ನಡೆಸಲು ನಿರ್ಣಯ ತಗೆದುಕೊಳ್ಳಲಾಗಿದೆ. ವಿವಿಧ ಸಭೆಗಳನ್ನು ನಡೆಸಿ ಹೋರಾಟದ ರೂಪರೇಷಗಳನ್ನು ಸಿದ್ಧ ಗೊಳಿಸಲಾಗುತ್ತದೆ. ವಿಭಾಗಗಳ ಸಮಾವೇಶದ ನಂತರ ಜನೇವರಿ 15ರಂದು ಕಾಗಿನೆಲೆ ಶ್ರೀಗಳಾದ ನಿರಂಜನಾನಂದಪುರಿ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಬೆಂಗಳೂರಿನವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡು ಪೆಬ್ರುವರಿ 7ರಂದು ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಸಮಾಜದ ಬಾಂಧವರನ್ನು ಸೇರಿಸಿ ಬೃಹತ್ ಸಮಾವೇಶವನ್ನು ನಡೆಸಲಾಗುವುದು. ಎಸ್.ಟಿ.ಮೀಸಲಾತಿ ಸಿಗುವವರೆಗೂ ಎಲ್ಲ ಹೋರಾಟಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಸಾನಿಧ್ಯವನ್ನು ಕೌಲಗುಡ್ಡದ ಅಮರೇಶ್ವರ ಮಹಾರಾಜರು ಮತ್ತು ಜಂಬಗಿಯ ಸುರೇಶ ಮಹಾರಾಜರು ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳಾದ ಸುಬ್ಬಣ್ಣ ಮೈಸೂರು, ಕೆ.ಬಿ.ಶಾಂತಪ್ಪ, ವೆಂಕಟೇಶಮೂರ್ತಿ, ಟಿ.ಬಿ.ಬೆಳಗಾವಿ, ದೊಡ್ಡಯ್ಯ ಆನೆಕಲ್, ಸಿದ್ದಲಿಂಗ ದಳವಾಯಿ, ಮಡ್ಡೆಪ್ಪ ತೋಳಿನವರ, ಲಕ್ಷ್ಮಣ ಮುಸಗುಪ್ಪಿ, ಪ್ರಕಾಶ ಡಂಗ, ಶಿವಪುತ್ರ , ಯಲ್ಲಪ್ಪ ಕುರುಬರ, ಸುರೇಶ ಮಾಯನ್ನವರ, ಎಚ್.ಎಸ್.ನಸಲಾಪೂರೆ, ಭಗವಂತ ಬಂತೆ, ವಿನಾಯಕ ಕಟ್ಟಿಕಾರ, ಡಿ.ಡಿ.ತೋಪ್ರೋಟಿ, ಮಾರುತಿ ಮರಡಿ, ಮಹಾದೇವ ಬರಗಾಲೆ, ಎಸ್.ಕೆ. ಖಜ್ಜನ್ನವರ ಸೇರಿದಂತೆ ಅನೇಕರು ಇದ್ದರು.