ಗೋಕಾಕ:ಮಾರಾಟ ಕೇಂದ್ರಗಳಲ್ಲಿ ಡಿಜಿಟಲೀಕರಣ ಪಾವತಿಯನ್ನು ಅಳವಡಿಸಿಕೊಳ್ಳಿ : ಶಿವನಗೌಡ ಪಾಟೀಲ
ಮಾರಾಟ ಕೇಂದ್ರಗಳಲ್ಲಿ ಡಿಜಿಟಲೀಕರಣ ಪಾವತಿಯನ್ನು ಅಳವಡಿಸಿಕೊಳ್ಳಿ : ಶಿವನಗೌಡ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 14 :
ಕೃಷಿ ಪರಿಕರ ಮಾರಾಟಗಾರರು ತಮ್ಮ ತಮ್ಮ ಮಾರಾಟ ಕೇಂದ್ರಗಳಲ್ಲಿ ಡಿಜಿಟಲೀಕರಣ ಪಾವತಿಯನ್ನು ಅಳವಡಿಸಿಕೊಳ್ಳಬೇಕೆಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.
ಶುಕ್ರವಾರದಂದು ಇಲ್ಲಿಯ ತಾಲೂಕು ಪಂಚಾಯತ ಸಭಾಭವನದಲ್ಲಿ ಜರುಗಿದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗೊಬ್ಬರ ವಿತರಿಸುವ ಮಾರಾಟ ಕೇಂದ್ರಗಳಲ್ಲಿ ಗೊಬ್ಬರದ ಪಾವತಿಯನ್ನು ಡಿಜಿಟಲೀಕರಣ ಮಾಡುವ ಅವಕಾಶವನ್ನು ರೈತರಿಗೆ ನೀಡಬೇಕೆಂದು ಸೂಚಿಸಿದರು. ಜೊತೆಗೆ ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ 167 ಕೃಷಿ ಪರಿಕರ ಮಾರಾಟಗಾರರು ಇದ್ದು ಈಗಾಗಲೇ ಶೇಕಡಾ 40% ರಷ್ಟು ಮಾರಾಟಗಾರರು ಡಿಜಿಟಲ್ ಪಾವತಿ ಅನುಸರಿಸುತ್ತಿದ್ದು, ಈ ಪದ್ಧತಿಯಲ್ಲಿ ಫೆÇೀನ್ ಪೇ, ಗೂಗಲ್ ಪೇ, ಪೇ.ಟಿ.ಎಂ ಭೀಮ್ ಮುಂತಾದ ಆಪ್‍ಗಳ ಮೂಲಕ ರೈತಬಾಂಧವರು ಡಿಜಿಟಲೀಕರಣದ ಮೂಲಕ ದರವನ್ನು ಪಾವತಿ ಮಾಡಬೇಕೆಂದು ತಿಳಿಸಿದರಲ್ಲದೇ ಈ ಪದ್ಧತಿ ಅಳವಡಿಸುವುದರಿಂದ ವ್ಯಾಪಾರ ವಹಿವಾಟುಗಳಲ್ಲಿ ಪಾರದರ್ಶಕತೆ ಉಂಟಾಗುವುದು. ಗೊಬ್ಬರದ ಪಾವತಿಯನ್ನು ಡಿಜಿಟಲೀಕರಣ ಮಾಡುವ ಅವಕಾಶವನ್ನು ರೈತರಿಗೆ ಕಲ್ಪಿಸಿಕೊಡಲು ಸೂಚಿಸಿದರು, ಮಾರಾಟಗಾರರು ಕೇವಲ ಲಾಭವನ್ನು ನೋಡದೆ ರೈತರಿಗೆ ಕಾಲಕಾಲಕ್ಕೆ ಕೃಷಿ ತಾಂತ್ರಿಕತೆಗಳನ್ನು ತಿಳಿಸುವುದರ ಮೂಲಕ ರೈತರಿಗೆ ಸೇವೆ ನೀಡಬೇಕು ಎಂದು ತಿಳಿಸಿದರು.
ಚಿಕ್ಕೋಡಿ ವಿಭಾಗದ ಉಪ ಕೃಷಿ ನಿರ್ದೇಶಕ ಎಲ್.ಆಯ್. ರೂಢಗಿ ಮಾತನಾಡಿ ಮಾರಾಟಗಾರರು ಕೇವಲ ರಸಗೊಬ್ಬರ ಪರಿಕರಗಳನ್ನು ಮಾರಾಟ ಮಾಡದೇ, ಆಧುನಿಕ ಕೃಷಿ ತಾಂತ್ರಿಕತೆಗಳ ಬಗ್ಗೆ ಗ್ರಾಮಮಟ್ಟದಲ್ಲಿ ಮಾಹಿತಿಯನ್ನು ನೀಡಬೇಕು. ರೈತರು ಹಿಂಗಾರು ಹಂಗಾಮಿಗೆ ಬೇಕಾಗುವ ಯೂರಿಯಾ ಡಿಎಪಿ, ಸಂಕೀರ್ಣ ಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡು ರೈತರಿಗೆ ಎಂ.ಆರ್.ಪಿ ದರದಲ್ಲಿ ಮಾರಾಟ ಮಾಡಲು ಸೂಚಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಡಿಜಿಟಲೀಕರಣದ ಮೂಲಕ ದರವನ್ನು ಪಾವತಿಸಲು ಸೂಚಿಸಿದರು. ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸುವ ನಿಯಮ ಮತ್ತು ಆದೇಶಗಳನ್ನು ಪಾಲಿಸುವ ಮೂಲಕ ರೈತರಿಗೆ ನಿಗದಿತ ದರದಲ್ಲಿ ಪರಿಕರಗಳನ್ನು ಮಾರಾಟ ಮಾಡಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ. ನದಾಫ್ ಮಾತನಾಡುತ್ತಾ ಕೃಷಿ ಪರಿಕರ ಮಾರಾಟಗಾರರು ಒಂದು ವಾರದ ಒಳಗಡೆ ನೂರರಷ್ಟು ಡಿಜಿಟಲೀಕರಣ ಪಾವತಿ ಸೇವೆಯನ್ನು ಮಾರಾಟ ಕೇಂದ್ರಗಳಲ್ಲಿ ಅಳವಡಿಸಬೇಕು. ಮಾರಾಟ ಕೇಂದ್ರದ ಮುಂದುಗಡೆ ಗೊಬ್ಬರಗಳ ದರ ಪಟ್ಟಿಯನ್ನು ಲಗತ್ತಿಸಬೇಕು ಹಾಗೂ ತಮ್ಮ ಕೇಂದ್ರದ ಪರವಾನಿಗೆಗಳನ್ನು ಕಾಲಕಾಲಕ್ಕೆ ನವೀಕರಣ ಮಾಡಿಸಿಕೊಳ್ಳಲು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರಾದ ಎಸ್.ಆರ್ ಹೆಗಡೆ, ಗೋಕಾಕ ಮತ್ತು ಮೂಡಲಗಿ ತಾಲೂಕಿನ ಕೃಷಿ ಅಧಿಕಾರಿಗಳು, ಕೃಷಿ ಇಲಾಖೆಯ ಸಿಬ್ಬಂದಿಗಳು ಹಾಗೂ ಎರಡು ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.