RNI NO. KARKAN/2006/27779|Friday, November 8, 2024
You are here: Home » breaking news » ಬೆಳಗಾವಿ:ಗೌರಿ ಲಂಕೇಶ ಹತ್ಯೆ: ಬೆಳಗಾವಿಯಲ್ಲಿ ಸಾಹಿತಿ ಮತ್ತು ಚಿಂತಕರಿಂದ ಖಂಡನಾ ಸಭೆ

ಬೆಳಗಾವಿ:ಗೌರಿ ಲಂಕೇಶ ಹತ್ಯೆ: ಬೆಳಗಾವಿಯಲ್ಲಿ ಸಾಹಿತಿ ಮತ್ತು ಚಿಂತಕರಿಂದ ಖಂಡನಾ ಸಭೆ 

ಗೌರಿ ಲಂಕೇಶ ಹತ್ಯೆ: ಬೆಳಗಾವಿಯಲ್ಲಿ ಸಾಹಿತಿ ಮತ್ತು ಚಿಂತಕರಿಂದ ಖಂಡನಾ ಸಭೆ

ಬೆಳಗಾವಿ ಸೆ 6: ನಿನ್ನೆ ಮಂಗಳವಾರ ಸಂಜೆ ಪ್ರಖರ ವಿಚಾರವಾದಿ,ಪತ್ರಕರ್ತೆ ಗೌರಿ ಲಂಕೇಶ ಅವರ ಅಮಾನುಷ ಹತ್ಯೆಯಿಂದ ಇಡೀ ನಾಡಿನ ವೈಚಾರಿಕ ಜಗತ್ತು ದಿಗ್ಭ್ರಾಂತಗೊಂಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾದಂತಾಗಿದೆಯೆಂದು ಇಂದು ಬುಧವಾರ ಸಂಜೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿದ್ದ ಹಿರಿಯ ಸಾಹಿತಿಗಳು,ಪ್ರಗತಿಪರ ಸಂಘಟನೆಗಳ ಪ್ರಮುಖರು,ಚಿಂತಕರು,ಪತ್ರಕರ್ತರು ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದರು.
ಕಲಬುರ್ಗಿಯವರು ಹಂತಕರ ಗುಂಡಿಗೆ ಬಲಿಯಾದ ಎರಡು ವರ್ಷಗಳ ನಂತರ ಮತ್ತೊಬ್ಬ ವಿಚಾರವಾದಿ ಗೌರಿ ಲಂಕೇಶ ಅವರು ಕೊಲೆಯಾಗಿರುವದು ನಾಡಿನ ಚಿಂತಕರನ್ನು,ಪ್ರಗತಿಪರ ವಿಚಾರವಾದಿಗಳನ್ನು ಆತಂಕಕ್ಕೀಡು ಮಾಡಿದೆಯೆಂದು ಸಭೆ ಅಭಿಪ್ರಾಯಪಟ್ಟಿತು.

ಸರಕಾರ ಕೊಡುವ ಭದ್ರತೆಯಲ್ಲಿ ವಿಚಾರವಾದಿಗಳು ಬದುಕುವದು ಕಷ್ಟ.ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು.ಇಲ್ಲವೇ ಗುಂಡಿಗೆ ಎದೆಕೊಡಲು ತಯಾರಾಗಿಯೇ ಬದುಕಬೇಕು ಎಂದು ಚಿಂತಕರು ತಮ್ಮ ನಿಲುವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಡಾ.ಬಸವರಾಜ ಜಗಜಂಪಿ,ಡಾ.ಚಂದ್ರಕಾಂತ ಪೋಕಳೆ,ಅಶೋಕ ಚಂದರಗಿ,ಯ.ರು.ಪಾಟೀಲ,ಶ್ರೀಮತಿ ಮಂಗಳಾ ಮೆಟಗುಡ್,ಎಮ್.ಬಿ.ಗೌಡ,ಸುಜಿತ್ ಮುಳಗುಂದ,ಶಾಜಿದ್,ರಾಮಚಂದ್ರ ಢವಳಿ,ಡಿ.ಎಸ್.ಇಂಚಲ,ರಾಜೇಂದ್ರ ಪಾಟೀಲ,ಚೆನ್ನಪ್ಪ ,ದರ್ಗೆ ಕಲಬುರ್ಗಿಯವರ ಹತ್ಯೆಯಾದಾಗ ಸರಕಾರ ಗಂಭೀರವಾಗಿ ತನಿಖೆ ನಡೆಸಿದ್ದರೆ ಇಂದು ಗೌರಿ ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೆಂದೂ ಹೇಳಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಸತ್ತೇ ಹೋಗುತ್ತಿದೆ.ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರ ತಲೆಯನ್ನೇ ತೆಗೆಯುವ ಪ್ರವೃತ್ತಿ ಹೆಚ್ಚುತ್ತಿದೆ.ಇಂಥ ಸ್ಥಿತಿಯಲ್ಲಿ ನಿರ್ಭಿಡೆ,ನಿರ್ಭಯದಿಂದ ವಿಚಾರ ಮಂಡಿಸುವದು ಅಸಾಧ್ಯದ ಮಾತು ಎಂದೂ ಅನೇಕರು ಆತಂಕ ವ್ಯಕ್ತಪಡಿಸಿದರು.
ಕೊನೆಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

Related posts: