ಗೋಕಾಕ:ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಲು : ಡಿಎಸ್ಎಸ್ ಆಗ್ರಹ
ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಲು : ಡಿಎಸ್ಎಸ್ ಆಗ್ರಹ
ಗೋಕಾಕ ಸೆ 7: ಪತ್ರಕರ್ತೆ, ವಿಚಾರವಾದಿ, ಚಿಂತಕಿಯಾದ ಗೌರಿ ಲಂಕೇಶ ಅವರನ್ನು ಹತ್ಯಗೈದ ಕೊಲೆಗಡುಕರನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಘಟಕದ ವತಿಯಿಂದ ಗುರುವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಡಿಎಸ್‍ಎಸ್ ತಾಲೂಕಾ ಸಂಚಾಲಕ ಲಕ್ಷ್ಮಣ ತೆಳಗಡೆ ಮಾತನಾಡಿ ಗೌರಿ ಲಂಕೇಶ ಅವರು ಕರ್ನಾಟಕ ರಾಜ್ಯವಲ್ಲ ಇಡೀ ದೇಶದ ಕೋಮುವಾದಿ ಶಕ್ತಿಗಳನ್ನು ಯಾವುದೇ ಮೂಲಾಜಿಲ್ಲದೇ ನೇರವಾಗಿ ಟೀಕಿಸುತ್ತಿದ್ದರು. ಸರ್ಕಾರ ಗೌರಿ ಲಂಕೇಶ ಹತ್ಯೆಯನ್ನು ಭಯೋತ್ಪಾದಕ ಕೃತ್ಯವೆಂದು ಘೋಷಿಸಬೇಕೆಂದು ಒತ್ತಾಯಿಸಿದರು. ಖ್ಯಾತ ಲೇಖಕ, ಪತ್ರಕರ್ತ ಲಂಕೇಶ ಪುತ್ರಿಯಾಗಿದ್ದ ಗೌರಿ ಲಂಕೇಶ ಶೋಷಿತರ ಪರ ಧ್ವನಿಯಾಗಿದ್ದರು. ದಲಿತ, ರೈತ ಹಾಗೂ ಮಹಿಳಾ ಪರ ಹೋರಾಟಗಳಲ್ಲಿ ತಮ್ಮನ್ನು ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಗೌರಿ ಲಂಕೇಶ ಅವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿರಂತರ ಪ್ರಯತ್ನವನ್ನು ನಡೆಸಿ ಹಾಲಿ ರಾಜ್ಯ ಸರಕಾರದ ಅವಧಿಯಲ್ಲಿ ಕೆಲವು ನಕ್ಸಲರ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಡಪಂಥೀಯ ಚಿಂತನೆಗಳು ಅವರಲ್ಲಿ ಹೆಚ್ಚು ಗೋಚರಿಸುತ್ತಿದ್ದವು. ತನ್ನ ತಂದೆಯ ಲಂಕೇಶರವರ ಜಾತ್ಯಾತೀತ ತತ್ವದ ಭದ್ರ ತಳಹದಿ ಹಾಕಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರು. ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ತಕ್ಷಣದಲ್ಲಿ ಗೌರಿ ಲಂಕೇಶ ಅವರನ್ನು ಹತ್ಯಗೈದವರನ್ನು ಬಂಧಿಸಬೇಕೆಂದು ಹೇಳಿದರಲ್ಲದೇ ಕಳೆದ ಎರಡು ವರ್ಷದ ಹಿಂದೆ ಹಿರಿಯ ಸಾಹಿತಿ ಡಾ| ಎಂ.ಎಂ.ಕಲಬುರ್ಗಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಇನ್ನೂವರೆಗೆ ಬಂಧಿಸಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಬಾಳೇಶ ಬನಹಟ್ಟಿ, ಶಾಂಬಪ್ಪ ಸಣ್ಣಕ್ಕಿ, ಗೋಪಾಲ ಹರಿಜನ, ಸುನೀಲ ಹಿರಗನ್ನವರ, ಶಂಕರ ಸಂತವ್ವಗೋಳ, ರಾಮಪ್ಪ ಮೇತ್ರಿ, ಬಸವರಾಜ ಕಾಡಾಪೂರ, ಶಿವಾನಂದ ಹೊಸಮನಿ ಸೇರಿದಂತೆ ಡಿಎಸ್‍ಎಸ್ ಕಾರ್ಯಕರ್ತರು ಇದ್ದರು.