ಘಟಪ್ರಭಾ:ಶಿಕ್ಷಕರು ಸಮಾಜಮುಖಿ ಶಿಕ್ಷಣ ನೀಡುವಂತಾಗಬೇಕು : ಶ್ರೀಶೈಲ ಹಿರೇಮಠ
ಶಿಕ್ಷಕರು ಸಮಾಜಮುಖಿ ಶಿಕ್ಷಣ ನೀಡುವಂತಾಗಬೇಕು : ಶ್ರೀಶೈಲ ಹಿರೇಮಠ
ಘಟಪ್ರಭಾ ಸೆ 9: ಶಿಕ್ಷಕ ಆತ್ಮವಿಮರ್ಶೆ ಜೊತೆಗೆ ಮೌಲ್ಯವರ್ಧನೆಯ ಆಧಾರಿತ ಪಾಠ ಬೋಧನೆಯನ್ನು ಮಾಡುವುದರ ಮೂಲಕ ಸಮಾಜ ಮುಖ ಶಿಕ್ಷಣ ನೀಡುವಂತಾಗಬೇಕೆಂದು ಗುಡಸ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಶ್ರೀಶೈಲ ಹಿರೇಮಠ ಹೇಳಿದರು.
ಅವರು ಶನಿವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಶ್ರೀ ರಾಚಯ್ಯಸ್ವಾಮಿ ಹಿರೇಮಠ ಪ್ರತಿಷ್ಠಾನ ವತಿಯಿಂದ ಗುರುಸ್ಮರಣೆ, ವರ್ಷದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಣ ಕೊಡುವ ಜವಾಬ್ದಾರಿಯ ಜೊತೆಗೆ ಮಗುವಿಗಾಗಿ ಪಾಲಕರೇ ಹೊರತು ನಿಮಗಾಗಿ ಮಗುವಲ್ಲ ಎಂಬ ಜವಾಬ್ದಾರಿಯನ್ನು ಪಾಲಕರು ನಿರ್ವಹಿಸಬೇಕು. ಎಲ್ಲ ಮಕ್ಕಳು ಶಿಕ್ಷಣವೇ ನನ್ನ ಹಕ್ಕು ಎನ್ನುವ ರೀತಿಯಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು. ಶಿಕ್ಷಕ,ಪಾಲಕ,ಮಗು ಈ ಮೂರು ಜನ ಕೂಡಿದಾಗ ಯಶಸ್ವಿ ಶಿಕ್ಷಣದ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ ಎಂದರು.
ಹುಣಶ್ಯಾಳ ಪಿಜಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗುರುನಾಋ ಕೋಳಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಶ್ರೀ ರಾಚಯ್ಯಸ್ವಾಮಿ ಹಿರೇಮಠ ಪ್ರತಿಷ್ಠಾನದ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ಯ ಗುರುಸ್ಮರಣೆ ಕಾರ್ಯಕ್ರಮದಡಿಯಲ್ಲಿ ಪಾರದರ್ಶಕವಾಗಿ ಶಿಕ್ಷಕರನ್ನು ಗುರುತಿಸಿ ಆಯ್ಕೆ ಮಾಡಿ ಅವರಿಗೆ ಪುರಸ್ಕಾರ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಬೆಳೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‍ಎಚ್‍ಎಸ್ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ ಬೆಳಗಲಿ ಮಾತನಾಡಿ ಪ್ರತಿಷ್ಠಾನಗಳು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಅಭಿವೃದ್ದಿ ಸಾಧ್ಯ. ರಾಜ್ಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯ ಅತ್ಯುತ್ತಮ ಸ್ಥಾನಗಳಿಸುವ ಮೂಲಕ ಶಿಕ್ಷಣದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷಕರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನಗಳು ಶಿಕ್ಷಕರಿಗೆ ಗೌರವ ನೀಡುವ ಮೂಲಕ ಶಿಕ್ಷಕರಲ್ಲಿ ಇನ್ನಷ್ಟು ಶಿಕ್ಷಣದ ಬಗ್ಗೆ ಜವಾಬ್ದಾರಿ ಕೆಲಸ ಅವರ ಮೇಲಿದೆ. ಪ್ರಶಸ್ತಿಗೊಸ್ಕರ ನಾವು ಕೆಲಸ ಮಾಡಬಾರದು. ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರುವ ಹಾಗೆ ನಾವು ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ರಾಚಯ್ಯಸ್ವಾಮಿ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷ ದುಂಡಯ್ಯ ಹಿರೇಮಠ ವಹಿಸಿದ್ದರು. ವೇದಿಕೆ ಮೇಲೆ ನಿವೃತ್ತ ಪ್ರೌಢಶಾಲೆ ಶಿಕ್ಷಕ ಹಾಗೂ ಹಿರಿಯರಾದ ಬಾಳಪ್ಪ ಕಡೇಲಿ, ಗ್ರಾ.ಪಂ ಅಧ್ಯಕ್ಷ ದಾವಲ ದಬಾಡಿ, ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ, ರಾಮಯ್ಯ ಆಲೋಶಿ, ವಿಠ್ಠಲ ಕರೋಶಿ, ಪ್ರತಿಷ್ಠಾನ ಸಂಯೋಜಕ ಶ್ರೀಕಾಂತ ಹಿರೇಮಠ ಇದ್ದರು.
ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದಿಂದ ಎಸ್‍ಎಚ್‍ಎಸ್ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ ಬೆಳಗಲಿ ಅವರಿಗೆ ಅತ್ಯುತ್ತಮ ಶಿಕ್ಷಕ ಮತ್ತು ಪ್ರಾಥಮಿಕ ವಿಭಾಗದಿಂದ ಶಿವಲೀಲಾ ನಿಜಾನಂದ ಅರಭಾಂವಿ ಅವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಐಶ್ವರ್ಯ ಕೋಪರ್ಡೆ, ಹರೀಶ ನಾಂದನಿ, ಉರ್ದುಶಾಲೆಯ ಪ್ರಧಾನ ಗುರುಮಾತೆ ಎಸ್.ಎಸ್.ಚುಲಬುಲೆ, ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಂದಿಕುರಬೇಟ ಕ್ಲಷ್ಟರ್ ವಲಯದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು, ಪಾಲಕರು, ಗ್ರಾಮದ ಮುಖಂಡರು ಇದ್ದರು.
ಕಾರ್ಯಕ್ರಮವನ್ನು ಶ್ರೀಕಾಂತ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಪಿ.ಎಚ್.ಗೋಸಬಾಳ ನಿರೂಪಿಸಿದರು.ಆರ್.ಬಿ.ಕರೆಪ್ಪಗೋಳ ವಂದಿಸಿದರು.