RNI NO. KARKAN/2006/27779|Friday, January 10, 2025
You are here: Home » breaking news » ಗೋಕಾಕ:ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಿರಲು ಅತಿಥಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಾಸಕ ಬಾಲಚಂದ್ರ

ಗೋಕಾಕ:ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಿರಲು ಅತಿಥಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಾಸಕ ಬಾಲಚಂದ್ರ 

ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಿರಲು ಅತಿಥಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ : ಶಾಸಕ ಬಾಲಚಂದ್ರ

ಗೋಕಾಕ ಸೆ 13 : ಸರ್ಕಾರಿ ಶಿಕ್ಷಕರ ಜೊತೆಗೆ ಮೂಡಲಗಿ ವಲಯದ ಫಲಿತಾಂಶ ರಾಜ್ಯದಲ್ಲಿಯೇ ಉತ್ತಮ ಕೀರ್ತಿ ತರಲು ಅತಿಥಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಪ್ರಶಂಸಿಸಿದರು.

ಬುಧವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಅತಿಥಿ ಶಿಕ್ಷಕರ ಬಾಕಿ 46.10 ಲಕ್ಷ ರೂ.ಗಳ ಗೌರವಧನ ವಿತರಿಸಿ ಅವರು ಮಾತನಾಡಿದರು.

ಮೂಡಲಗಿ ವಲಯದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಿರಲು ಅತಿಥಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಕ್ಷೇತ್ರದಲ್ಲಿ 324 ಅತಿಥಿ ಶಿಕ್ಷಕರನ್ನು ನಿಯೋಜಿಸಿದ್ದು, ಸರ್ಕಾರಿ ಶಿಕ್ಷಕರ ಜೊತೆಗೆ ಅತಿಥಿ ಶಿಕ್ಷಕರು ಶಾಲಾ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ತರ ಕಾಳಜಿವಹಿಸಿದ್ದಾರೆ. ಕಲಿಕೆ ಬಲವರ್ಧನೆಯಾಗಿದೆ. ಮಕ್ಕಳ ಶಾಲಾ ದಾಖಲಾತಿ ಗಣನೀಯ ಹೆಚ್ಚಳವಾಗಿದೆ. ಅಲ್ಲದೇ ಶಾಲೆ ಬಿಡುವ ಪ್ರಮಾಣ ಕಡಿಮೆಯಾಗಿದೆ. ಸತತ ಮೂರು ವರ್ಷಗಳಿಂದ ವಲಯದ ಸಾಧನೆ ತೃಪ್ತಿಕರವಾಗಲು ಇವರದ್ದು ಪಾತ್ರ ಹಿರಿದು ಎಂದು ಹೇಳಿದರು.

ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಕಳೆದ ಒಂದು ದಶಕದಿಂದ ಶ್ರಮಿಸುತ್ತಿದ್ದೇವೆ. ಶಿಕ್ಷಣಕ್ಕೆ ಪ್ರಮುಖ ಪ್ರಾಶಸ್ತ್ಯ ನೀಡುತ್ತಿದ್ದೇವೆ. ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಧ್ಯೆಯೂ ಇಲ್ಲಿಯ ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಶಿಕ್ಷಕರು ನೀಡುತ್ತಿದ್ದಾರೆ. ಮಂಗಳೂರು-ಬೆಂಗಳೂರು ಮಾದರಿಯಲ್ಲಿ ಇಲ್ಲಿಯ ಶಿಕ್ಷಣ ಪ್ರಗತಿದಾಯಕವಾಗಿದೆ. ಇಲ್ಲಿಯ ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಶಿಕ್ಷಕರಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.

ಮೂಡಲಗಿ ವಲಯದ ಕೆಲವು ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳನ್ನು ದಾನಿಗಳಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಶಾಲೆಗಳ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ವಲಯದ 324 ಅತಿಥಿ ಶಿಕ್ಷಕರಿಗೆ ಬಾಕಿ ಉಳಿದಿರುವ 46.10 ಲಕ್ಷ ರೂ.ಗಳ ಗೌರವಧನವನ್ನು ವಿತರಿಸಿದರು.
ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶೈಕ್ಷಣಿಕ ಕಾಳಜಿಯನ್ನು ವಿವರಿಸಿದರು.

ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ, ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ ನಾಯಿಕ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಆರ್.ಎಂ. ಮಹಾಲಿಂಗಪೂರ, ಮಾಲತೇಶ ಸಣ್ಣಕ್ಕಿ ಉಪಸ್ಥಿತರಿದ್ದರು.

ಗುರು ಹೇಳಿದ ಮಾತು ನಿಜವಾಯಿತು : 8ನೇ ತರಗತಿಯಲ್ಲಿ ನಾನು ಓದುತ್ತಿದ್ದೆ. ಶಾಲೆಯ ವಿಜ್ಞಾನ ಶಿಕ್ಷಕರಾಗಿದ್ದ ಗಡಾದ ಎಂಬುವವರು ನಮಗೆ ಖಾಲಿ ಪೇಪರ ಕೊಟ್ಟು ಶಾಹಿಯನ್ನು ಸಿಡಿಸಲು ಹೇಳಿದರು. ನಂತರ ಒಬ್ಬೊಬ್ಬ ಸಹಪಾಠಿಯನ್ನು ಕೇಳಿದ ಶಿಕ್ಷಕರು ಇದು ಏನು ಎಂದು ಪ್ರಶ್ನಿಸಿದರು. ಒಬ್ಬೊಬ್ಬ ಸಹಪಾಠಿ ಉತ್ತರ ನೀಡಿದರು. ನಂತರ ನನ್ನನ್ನು ಕೇಳಿದ ಶಿಕ್ಷಕರು ಇದರಲ್ಲಿ ನನಗೆ ಮುಗಿಲಿನ ತರಹ ಕಾಣುತ್ತದೆ ಎಂದು ಉತ್ತರ ಕೊಟ್ಟೆ. ಆಗ ಶಿಕ್ಷಕರು ಶಹಬ್ಬಾಶ್ ಎಂದು ಬೆನ್ನುಚಪ್ಪರಿಸಿ ನೀನು ವಿಮಾನದಲ್ಲಿಯೇ ಹಾರುತ್ತಿಯಾ ಎಂದು ಹೇಳಿದರು. ಶಿಕ್ಷಕರ ಆಶಯದಂತೆ ಇಂದು ನಾನು ಶಾಸಕನಾಗಿ, ಸಚಿವನಾಗಿ ಜನಸೇವೆ ಮಾಡುತ್ತ ವಿಮಾನದಲ್ಲಿ ಓಡಾಡುತ್ತಿರುವುದು ಶಿಕ್ಷಕರು ಆಡಿದ ಮಾತುಗಳೇ ಕಾರಣವೆಂದು ತಮ್ಮ ವಿದ್ಯಾರ್ಥಿ ಜೀವನದ ಘಟನೆಯನ್ನು ಮೆಲಕು ಹಾಕಿದರು. ಮಕ್ಕಳಿಗೆ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಬಾಲಚಂದ್ರ ಜಾರಕಿಹೊಳಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.

Related posts: