ಗೋಕಾಕ:ಕೇಂದ್ರ ಸಚಿವ ಸಂಪುಟ ಪುನಾರಚನೆ : ರಾಜ್ಯದಿಂದ ಈರಣ್ಣ ಕಡಾಡಿಗೆ ಸಿಗುತ್ತಾ ಚಾನ್ಸ್..?
ಕೇಂದ್ರ ಸಚಿವ ಸಂಪುಟ ಪುನಾರಚನೆ : ರಾಜ್ಯದಿಂದ ಈರಣ್ಣ ಕಡಾಡಿಗೆ ಸಿಗುತ್ತಾ ಚಾನ್ಸ್..?
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 3 :
ಕೇಂದ್ರ ಸಚಿವ ಸಂಪುಟ ಪುನರ ರಚನೆಯಾಗುತ್ತಿರುವ ಬೆನ್ನಲ್ಲೇ ಮಾಜಿ ಕೇಂದ್ರ ರಾಜ್ಯ ಸಚಿವ ದಿವಂಗತ ಸುರೇಶ ಅಂಗಡಿ ಅವರು ಹೊಂದಿದ್ದ ರೈಲ್ವೆ ಖಾತೆ ಯಾರ ಪಾಲಾಗಲಿದೆ ಎಂಬ ಚರ್ಚೆಗಳು ಜೋರಾಗಿ ನಡೆದಿವೆ.
ರಾಜ್ಯದ ಸಂಸದರಾಗಿರುವ ಬಿ.ವೈ ರಾಘವೇಂದ್ರ , ದಿ.ಸಿ.ಎಂ ಉದಾಸಿ ಅವರ ಪುತ್ರ ಶಿವಕುಮಾರ್ ಉದಾಸಿ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಕಲಬುರ್ಗಿ ಸಂಸದ ಉಮೇಶ ಜಾಧವ ಸೇರಿದಂತೆ ಇತರ ಹೆಸರುಗಳು ರಾಜಕೀಯ ಪಡಶಾಲೆಯಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಕಳೆದ ವರ್ಷ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗುವ ಮುಖೇನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಬೆಳಗಾವಿ ಜಿಲ್ಲೆಯ ಕಲ್ಲೋಳಿ ಗ್ರಾಮದ ಈರಣ್ಣ ಕಡಾಡಿ ಅವರಿಗೆ ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಈ ಭಾರಿ ಸ್ಥಾನ ಸಿಕ್ಕರೂ ಸಹ ಅಚ್ಚರಿ ಪಡುವಂತಿಲ್ಲ ಎಂಬ ಚರ್ಚೆಗಳು ಸಹ ಸೈಲಂಟಾಗಿ ನಡೆದಿವೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಪ್ರಭಾವ ಬಿರಿರುವ ಸಂಸದ ಈರಣ್ಣ ಕಡಾಡಿ ಅವರು ಘಟಾನುಘಟಿ ನಾಯಕರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿಕೊಂಡು ಪಕ್ಷದಲ್ಲಿ ತಮ್ಮ ಛಾಪನ್ನು ಮೂಡಿಸಿ ರಾಷ್ಟ್ರ ಹಾಗೂ ರಾಜ್ಯ ನಾಯಕರ ನಂಬಿಕೆಯನ್ನು ಗಳಿಸಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾದ ನಂತರ ಒಂದರ ಹಿಂದೆ ಒಂದರಂತೆ ಹುದ್ದೆಗಳು ಈರಣ್ಣ ಕಡಾಡಿ ಅವರನ್ನು ಹುಡುಕಿಕೊಂಡು ಬಂದು ಅವರು ಮಡಿಲು ಸೇರಿವೆ ಎಂಬುವುದು ಇಲ್ಲಿ ಉಲ್ಲೇಖನೀಯ. ಈರಣ್ಣ ಕಡಾಡಿ ಅವರು ರಾಜ್ಯಸಭೆ ಸ್ಥಾನದ ಜೊತೆಗೆ ಕೊಂಕಣ ರೈಲು ಮಂಡಳಿಯ ಸದಸ್ಯರಾಗಿ, ಕರ್ನಾಟಕ ರೈತ ಮೋರ್ಚಾದ ರಾಜ್ಯಾಧ್ಯಕ್ಷರಾಗಿ , ಕೇಂದ್ರ ಆಹಾರ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜುಲೈ ತಿಂಗಳ 7 ರ ಒಳಗೆ ಮೊದಲ ಹಂತದ ವಿಸ್ತರಣೆ ಹಾಗೂ ಮುಂಗಾರು ಅಧಿವೇಶನ ಮುಗಿದ ಬಳಿಕ ಎರಡನೇ ಹಂತದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಯಾಗುತ್ತಿರುವ ಬೆನ್ನಲ್ಲೇ ರಾಜ್ಯದ ಸಂಸದರು ಸಂಪುಟ ಸೇರಲು ಕಸರತ್ತು ನಡೆಸಿರುವ ಸಂಧರ್ಭದಲ್ಲಿ ಯಾವುದೇ ತೆರನಾದ ಲಾಬಿ ನಡೆಸದೆ ಸೈಲಂಟಾಗಿ ತಮ್ಮ ಕಾರ್ಯನಿರ್ವಹಿಸುತ್ತಿರುವ ಕಡಾಡಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕರು ಅಚ್ಚರಿ ಪಡಬೇಕಾಗಿಲ್ಲ ಎಂಬ ಚರ್ಚೆಗಳು ಸಹ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಮಾಡಿವೆ. ಒಟ್ಟಾರೆ ತಮ್ಮಗೆ ನೀಡಲಾದ ಹುದ್ದೆಗಳಿಗೆ ನ್ಯಾಯ ಒದಗಿಸವಲ್ಲಿ ಸಕ್ರೀಯವಾಗಿರುವ ಸಂಸದ ಈರಣ್ಣ ಕಡಾಡಿ ಅವರಿಗೆ ಈ ಬಾರಿ ಮೋದಿ ಸಂಪುಟದಲ್ಲಿ ಸ್ಥಾನ ದೊರೆಯುತ್ತದೆಯಾ? ಎಂಬ ಕುತೂಹಲ ಭರಿತ ಪ್ರಶ್ನೆಗೆ ಕೆಲ ದಿನಗಳಲ್ಲಿ ಉತ್ತರ ದೊರೆಯಲಿದೆ.