RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಮಾರ್ಚ ತಿಂಗಳ ಒಳಗೆ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣ : ಶಾಸಕ ಬಾಲಚಂದ್ರ

ಘಟಪ್ರಭಾ:ಮಾರ್ಚ ತಿಂಗಳ ಒಳಗೆ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣ : ಶಾಸಕ ಬಾಲಚಂದ್ರ 

ಮಾರ್ಚ ತಿಂಗಳ ಒಳಗೆ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣ : ಶಾಸಕ ಬಾಲಚಂದ್ರ

ಘಟಪ್ರಭಾ ಸೆ 16: ಪಿಎಂಜಿಎಸ್‍ವಾಯ್ ಯೋಜನೆಯಡಿ 18.18 ಕೋಟಿ ರೂ. ರಸ್ತೆ ಕಾಮಗಾರಿಗಳಿಗಾಗಿ ಮಂಜೂರಾತಿ ದೊರೆತಿದ್ದು, ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿಗೆ ಸಮೀಪದ ರಾಜಾಪೂರ ಗ್ರಾಮದಲ್ಲಿ ಶನಿವಾರದಂದು 6.69 ಕೋಟಿ ರೂ. ವೆಚ್ಚದ ರಾಜಾಪೂರ-ಚೂನಿಮಟ್ಟಿ-ಸಂಗನಕೇರಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಿಎಂಜಿಎಸ್‍ವಾಯ್ ಯೋಜನೆಯಡಿ ಈ ಕಾಮಗಾರಿಯನ್ನು ನಿರ್ಮಿಸಲಾಗುತ್ತಿದೆ

ಹಡಿಗನಾಳ ಕ್ರಾಸ್‍ದಿಂದ ಮಮದಾಪೂರ ರಸ್ತೆಗೆ 1.66 ಕೋಟಿ ರೂ., ಖಾನಟ್ಟಿ- ಮಹಾಲಿಂಗಪೂರ ರಸ್ತೆಗೆ 1.79 ಕೋಟಿ ರೂ., ಅರಭಾಂವಿ ಶಿಂದಿಕುರಬೇಟ ರಸ್ತೆಯಿಂದ ಬಬಲಾದಿಮಠ ರಸ್ತೆಗೆ 2.08 ಕೋಟಿ ರೂ., ರಂಗಾಪೂರ- ಮುನ್ನ್ಯಾಳ ರಸ್ತೆಗೆ 2.27 ಕೋಟಿ ರೂ. ಹಾಗೂ ಕಳ್ಳಿಗುದ್ದಿಯಿಂದ ಮನ್ನಿಕೇರಿ ವರೆಗಿನ ರಸ್ತೆ ಕಾಮಗಾರಿಗೆ 3.67 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.

ಅರಭಾಂವಿ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಮುಂದಿನ ಮಾರ್ಚ ತಿಂಗಳ ಒಳಗೆ ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ರಾಜಾಪೂರ ಗ್ರಾಮದ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಸುಮಾರು 7.57 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗುತ್ತಿದೆ. ಹೊಸ ಸರ್ಕಾರಿ ಕಿರಿಯ ಮಹಾವಿದ್ಯಾಲಯ, ಸರ್ಕಾರಿ ಆಸ್ಪತ್ರೆ, ಪಶು ಚಿಕಿತ್ಸಾಲಯಗಳ ಮಂಜೂರಾತಿಗೆ ಶ್ರಮಿಸುವುದಾಗಿ ತಿಳಿಸಿದರು. ಗ್ರಾಮದಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಪ್ರತಿ ಗ್ರಾಮಗಳಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿದರೆ ಗ್ರಾಮಗಳು ವಿಕಾಸಗೊಳ್ಳುತ್ತವೆ ಎಂದು ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, 16.25 ಲಕ್ಷ ರೂ. ವೆಚ್ಚದ ರಾಜೀವಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

65.67 ಲಕ್ಷ ಮೋತ್ತದ ಆರ್‍ಎಂಎಸ್‍ಎ ಯೋಜನೆಯಡಿ ನೂತನವಾಗಿ ನಿರ್ಮಿಸಿದ ಸರ್ಕಾರಿ ಪ್ರೌಢ ಶಾಲೆ, 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಂಗ ಮಂದಿರವನ್ನು ಉದ್ಘಾಟಿಸಿದರು.

ಗ್ರಾ.ಪಂ ಅಧ್ಯಕ್ಷೆ ಸಿದ್ದವ್ವಾ ಜಟ್ಟನ್ನವರ, ಜಿ.ಪಂ ಸದಸ್ಯೆ ಕಸ್ತೂರಿ ಕಮತಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪಿಎಲ್‍ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ರಾಮಚಂದ್ರ ಪಾಟೀಲ, ಬೈರಪ್ಪಾ ಯಕ್ಕುಂಡಿ, ಘ.ಯೋ.ನೀ.ಬ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ನಿರ್ದೇಶಕ ಬಸಪ್ಪಾ ಪಂಡ್ರೋಳಿ, ಪ್ರಭಾ ಶುಗರ ನಿರ್ದೇಶಕ ಶಿವಲಿಂಗ ಪೂಜೇರಿ, ಎಪಿಎಂಸಿ ನಿರ್ದೇಶಕರಾದ ಶ್ರೀಪತಿ ಗಣೇಶವಾಡಿ, ಅಶೋಕ ನಾಯಿಕ, ಗ್ರಾ.ಪಂ ಮಾಜಿ ಅಧ್ಯಕ್ಷ ಸಂಗಯ್ಯಾ ಹೂನೂರ, ಚಿಂತಾಮನಿ ಮೇಟಿ, ಚೂನಪ್ಪಾ ಪೂಜೇರಿ, ಪಿಡಬ್ಲ್ಯೂಡಿ ಎಇಇ ಹೊನ್ನಾವರ, ಪಿಎಂಜಿಎಸ್‍ವಾಯ್ ಎಇಇ ಎಸ್.ಎಸ್.ಸೊಬರದ, ಎಇ ಆರ್.ಬಿ.ಶಿವರಾಯಿ, ಬಿಇಓ ಗಂಗಾಧರ, ಬಿ.ಬಿ.ದಾಸನವರ, ಪಿಡಿಓ ಎಚ್.ವಾಯ್.ತಾಳಿಕೋಟಿ, ಮೊದಲಾದವರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ರಾಜಾಪೂರ ಗ್ರಾಮದ ವಿವಿಧ ಸಂಘ ಸಂಸ್ಥೆಗಳಿಂದ ಸತ್ಕರಿಸಲಾಯಿತು. ಪ್ರಭಾ ಶುಗರ ಮಾಜಿ ನಿರ್ದೇಶಕ ಬಸವಂತ ಕಮತಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಕಾಳಜಿಯನ್ನು ಶ್ಲಾಘಿಸಿದರು.

Related posts: