RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ:ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ 

ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 5 :

 
ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಹಾನಿಯಾಗಿರುವ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ತ್ವರಿತಗತಿಯಲ್ಲಿ ಕೈಗೊಂಡು ವರದಿ ಸಲ್ಲಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಪ್ರವಾಹ ಬಾಧಿತ ಸಂಬಂಧ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಸಾರ್ವಜನಿಕ ದೂರುಗಳು ಬರದ ರೀತಿಯಲ್ಲಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು.
ಇತ್ತೀಚೆಗೆ ಸುರಿದ ಮಳೆ ಮತ್ತು ಪ್ರವಾಹದಿಂದ ಘಟಪ್ರಭಾ ನದಿ ತೀರದ ಗ್ರಾಮಗಳಲ್ಲಿನ ಮನೆಗಳಿಗೆ ನೀರು ನುಗ್ಗಿರುವ ಸಮೀಕ್ಷೆಯನ್ನು ಕೈಗೊಳ್ಳಬೇಕು. ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಮತ್ತು ನೋಡಲ್ ಅಧಿಕಾರಿಗಳು ಕೂಡಲೇ ಸಮೀಕ್ಷೆ ಕಾರ್ಯವನ್ನು ಮಾಡಬೇಕು. ಯಾರ ಮುಲಾಜಿಲ್ಲದೇ ಮನೆಗಳಿಗೆ ನೀರು ಪ್ರವೇಶಗೊಂಡ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಬೇಕು. ಸರ್ಕಾರ ಇಂತಹವರಿಗೆ 10 ಸಾವಿರ ರೂ.ಗಳ ಸಹಾಯಧನ ನೀಡಲಿದೆ. ಆದಷ್ಟು ಬೇಗನೆ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ಪ್ರವಾಹದಿಂದ ಹಾನಿಯಾದ ಮನೆಗಳನ್ನು ಸಹ ಸಮೀಕ್ಷೆ ನಡೆಸಬೇಕು. ಇದರಲ್ಲಿ ಇಂಜನೀಯರ್, ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಮತ್ತು ನೋಡಲ್ ಅಧಿಕಾರಿಗಳು ತಂಡದಲ್ಲಿದ್ದು, ಮನೆಗಳ ಹಾನಿ ಪ್ರಮಾಣದ ಬಗ್ಗೆ ವರದಿ ಸಲ್ಲಿಸಬೇಕು. ಅತೀವೃಷ್ಟಿಯಿಂದಾಗಿ ಬೆಳೆಗಳ ಹಾನಿಯಾಗಿದ್ದು, ಇವುಗಳನ್ನು ಸಹ ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹದಿಂದ ಸರಕಾರಿ ಕಟ್ಟಡಗಳು, ರಸ್ತೆಗಳು, ವಿದ್ಯುತ್ ಟ್ರಾಸ್ಪಾರ್ಮರಗಳು ಹಾಗೂ ವಿದ್ಯುತ್ ಕಂಬಗಳು ಸಹ ಹಾಳಾಗಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ವರದಿ ನೀಡಬೇಕು. ಪ್ರವಾಹದಿಂದಾಗಿ ಹಾನಿಯಾಗಿರುವ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ, ಗೋಕಾಕ ಬಿಇಓ ಜಿ.ಬಿ. ಬಳಗಾರ, ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಅವಳಿ ತಾಲೂಕುಗಳ ನೋಡಲ್ ಅಧಿಕಾರಿಗಳು, ಇಂಜನೀಯರರು, ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು, ಉಪಸ್ಥಿತರಿದ್ದರು.

Related posts: