RNI NO. KARKAN/2006/27779|Saturday, December 14, 2024
You are here: Home » breaking news » ಮೂಡಲಗಿ: ಮೂಡಲಗಿ ತಾಲೂಕು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ: ಮೂಡಲಗಿ ತಾಲೂಕು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಮಾಜಿ ಸಚಿವ ಬಾಲಚಂದ್ರ 

ಮೂಡಲಗಿ ತಾಲೂಕು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ ಸೆ 17: ಮೂಡಲಗಿ ಪಟ್ಟಣವನ್ನು ಹೊಸ ತಾಲೂಕನ್ನಾಗಿ ಮಾಡಿಯೇ ತೀರುತ್ತೇನೆ. ಒಂದು ವೇಳೆ ಸರ್ಕಾರ ಮೂಡಲಗಿಯನ್ನು ತಾಲೂಕಾ ಮಾಡದಿದ್ದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದರು.

ಮೂಡಲಗಿಯನ್ನು ತಾಲೂಕಾ ಪಟ್ಟಿಯಿಂದ ಕೈ ಬಿಟ್ಟಿದನ್ನು ಖಂಡಿಸಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ಬಂದ್ ಆಚರಣೆಯ ಹಿನ್ನಲೆಯಲ್ಲಿ ಭಾನುವಾರ ಸಂಜೆ ಪಾಲ್ಗೊಂಡು ಅವರು ಮಾತನಾಡಿದರು.

ಮೂಡಲಗಿ ಹೊಸ ತಾಲೂಕು ಕೇಂದ್ರವಾಗುವುದು ಶತ ಸಿದ್ದ. ಇದರಲ್ಲಿ ಎರಡು ಮಾತಿಲ್ಲ. ಗೋಕಾಕದ ಲಕ್ಷ್ಮೀದೇವರ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ. ತಿಂಗಳೊಳಗೆ ಮೂಡಲಗಿ ತಾಲೂಕು ಆದೇಶ ಪತ್ರವನ್ನು ತಂದು ಕೊಡ್ತಿನಿ. ಆವಾಗಲಾದರೂ ನನ್ನ ಮೇಲೆ ನಿಮಗೆ ಭರವಸೆ ಬರುತ್ತೆ. ಇದು ಸತ್ಯವೆಂದು ಅವರು ಹೇಳಿದರು.

ಮೂಡಲಗಿ ತಾಲೂಕು ಕೇಂದ್ರವಾಗಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಶೀಘ್ರದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇನೆ. ಹೋರಾಟ ಸಮೀತಿಯ ಪ್ರಮುಖರನ್ನು ಕರೆದೊಯ್ದು ತಾಲೂಕು ಸ್ಥಳವಾಗಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತೇನೆ ಎಂದು ನೆರೆದಿದ್ದ ಅಪಾರ ಜನಸ್ತೋಮಕ್ಕೆ ಭರವಸೆ ನೀಡಿದರು.

ಜಿ.ಪಂ ಮಾಜಿ ಅಧ್ಯಕ್ಷ ಈರಪ್ಪ ಕಡಾಡಿ ಮಾತನಾಡಿ, ಮೂಡಲಗಿ ತಾಲೂಕ ರಚನೆಗೆ ಸಂಬಂಧಪಟ್ಟಂತೆ ಎಲ್ಲ ಆಯೋಗಗಳೂ ಶಿಫಾರಸ್ಸು ಮಾಡಿದ್ದರೂ ಮೂಡಲಗಿಯನ್ನು ಕೈಬಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಮೂಡಲಗಿ ಹೊಸ ತಾಲೂಕು ಕೇಂದ್ರದಲ್ಲಿ ಗೋಕಾಕ ತಾಲೂಕಿನ ಗ್ರಾಮಗಳು ಸೇರ್ಪಡೆಯಾಗಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. 30ಕಿ.ಮೀ ಆಸುಪಾಸಿನ ಹಳ್ಳಿಗಳನ್ನು ಒಳಗೊಂಡು ಮೂಡಲಗಿ ತಾಲೂಕನ್ನು ರಚಿಸುವಂತೆ ಕೋರಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುತುವರ್ಜಿವಹಿಸಿ ಮೂಡಲಗಿ ನಾಗರೀಕರ ಬಹು ವರ್ಷಗಳ ಬೇಡಿಕೆಯನ್ನು ನನಸು ಮಾಡುವಂತೆ ಕೋರಿಕೊಂಡರು.

ಬಿಜೆಪಿ ಮುಖಂಡ ಅಶೋಕ ಪೂಜೇರಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ತಾಲೂಕು ರಚನೆ ಸಂಪುಟದಲ್ಲಿ ಅನುಮೋದನೆಗೆ ಮಾತ್ರ ಬಾಕಿಯಿದೆ. ಹೇಗಾದರೂ ಮಾಡಿ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ಮಾಡಿಸುವ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರುವಂತೆ ಕೋರಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿಕೊಂಡರು.

ಕಲ್ಲೋಳಿಯ ಹಿರಿಯ ಸಹಕಾರಿ ಈರಪ್ಪ ಬೆಳಕೂಡ ಮಾತನಾಡಿ, ಹೊಸ ತಾಲೂಕುಗಳ ರಚನೆಯಲ್ಲಿ ಮೂಡಲಗಿಗೆ ಅನ್ಯಾಯವಾಗಿದೆ. ಎಲ್ಲೂ ಅನ್ವಯವಾಗದ ಹೋಬಳಿ ಮಟ್ಟದ ಗ್ರಾಮಗಳು ಮೂಡಲಗಿಗೆ ಹೇಗೆ ಅನ್ವಯವಾಗುತ್ತದೆ ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.

ಹೋರಾಟ ಸಮಿತಿಯ ಸಂಚಾಲಕ ಭೀಮಪ್ಪ ಗಡಾದ ಮಾತನಾಡಿ, ಶಾಸಕರು ಈ ಸರದಿ ಸತ್ಯಾಗ್ರಹದಲ್ಲಿ ಭಾಗಿಯಾಗುವುದಿಲ್ಲ ಅವರು ತಾಲೂಕು ಸ್ಥಳವನ್ನಾಗಿ ಮಾಡಿಕೊಂಡು ಮೂಡಲಗಿಗೆ ಬರುತ್ತಾರೆ. ತಾಲೂಕು ಕೇಂದ್ರ ಕೈಬಿಟ್ಟಿರುವುದರಲ್ಲಿ ಅವರ ಪಾತ್ರ ಏನೂ ಇಲ್ಲ. ಅವರ ಬಗ್ಗೆ ತಪ್ಪಾಗಿ ಅರ್ಥೈಸಬಾರದು. ಹಿಡಿದ ಕೆಲಸವನ್ನು ಚಾಚು ತಪ್ಪದೇ ಮಾಡುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಾಲೂಕು ರಚನೆಯ ಆದೇಶ ಪತ್ರವನ್ನು ತಂದೇ ತರುವ ವಿಶ್ವಾಸ ನಮಗಿದೆ. ಆದೇಶ ಪತ್ರ ತರುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದರು.
ಮೂಡಲಗಿಯನ್ನು ತಾಲೂಕ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ತಾಲೂಕ ಹೋರಾಟ ಸಮಿತಿಯು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಅರ್ಪಿಸಿತು.

Related posts: