ಗೋಕಾಕ:ಕಾರ್ಮಿಕರ ಅಭಿವೃದ್ಧಿಗೆ ಸರಕಾರ ನಾನಾ ಸೌಲಭ್ಯ ಜಾರಿಗೊಳಿಸಿದೆ : ವೆಂಕಟೇಶ್ ಸಿಂದಿಹಟ್ಟಿ
ಕಾರ್ಮಿಕರ ಅಭಿವೃದ್ಧಿಗೆ ಸರಕಾರ ನಾನಾ ಸೌಲಭ್ಯ ಜಾರಿಗೊಳಿಸಿದೆ : ವೆಂಕಟೇಶ್ ಸಿಂದಿಹಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 19 :
ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಸರಕಾರ ನಾನಾ ಸೌಲಭ್ಯ ಜಾರಿಗೊಳಿಸಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಕಾರ್ಮಿಕ ಇಲಾಖೆ ಉಪ ಆಯುಕ್ತರು ವೆಂಕಟೇಶ್ ಸಿಂದಿಹಟ್ಟಿ ಹೇಳಿದರು
ಗುರುವಾರದಂದು ಕಾರ್ಮಿಕ ಇಲಾಖೆ ವತಿಯಿಂದ ನಗರದ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಕಾರ್ಮಿಕರಿಗೆ ಸಂಬಂಧಿಸಿದ ಬಾಕಿ ಅರ್ಜಿ ವಿವೇವಾರಿ “ಕಾರ್ಮಿಕ ಅದಾಲತ್ “ಕಾರ್ಯಕ್ರಮದಲ್ಲಿ ಕಾರ್ಮಿಕರ ಅರ್ಜಿಗಳನ್ನು ವಿಲೇವಾರಿ ಮಾಡಿ ಅವರು ಮಾತನಾಡಿದರು.
ಸಂಘಟಿತ, ಅಸಂಘಟಿತ ಕಾರ್ಮಿಕರೆಲ್ಲರೂ ಕಾಲ ಕಾಲಕ್ಕೆ ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಬೇಕು. ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಸದಸ್ಯತ್ವ ಪಡೆದುಕೊಂಡಲ್ಲಿ ಸರಕಾರದಿಂದ ಸಿಗುವ ನಾನಾ ಸೌಲಭ್ಯ ಪಡೆದುಕೊಳ್ಳಲು ಸಹಕಾರಿ ಆಗಲಿದೆ ಎಂದು ಹೇಳಿದರು.
ಕಾರ್ಮಿಕರ ಮಕ್ಕಳಿಗೆ ಹೆಣ್ಣಿಗೆ 30 ಸಾವಿರ, ಗಂಡಿಗೆ 20 ಸಾವಿರ ರೂ. ನೀಡಲಾಗುವುದು. ಪಿಯು ಓದುವ ಮಕ್ಕಳಿಗೆ ವಾರ್ಷಿಕ 7 ಸಾವಿರ ಹಾಗೂ ಪದವಿ ಶಿಕ್ಷ ಣ ಪಡೆಯುವ ಮಕ್ಕಳಿಗೆ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೆಲಸದ ವೇಳೆ ಯಾವುದೇ ಅವಘಡ ಸಂಭವಿಸಿದಲ್ಲಿ 1 ರಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಮರಣ ಹೊಂದುವ ಕಾರ್ಮಿಕರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡುವ ವ್ಯವಸ್ಥೆ ಜಾರಿಯಲ್ಲಿದೆ ಇವುಗಳ ಸದುಪಯೋಗವನ್ನು ಎಲ್ಲಾ ಕಾರ್ಮಿಕರು ಪಡೆದುಕೊಳ್ಳಬೇಕೆಂದು ವೆಂಕಟೇಶ್ ಸಿಂದಿಹಟ್ಟಿ ತಿಳಿಸಿದರು.
ಇದೇ ಸಂದರ್ಭದಲ್ಲಿ 1000ಕ್ಕೂ ಅರ್ಜಿಗಳನ್ನು ವಿವೇವಾರಿ ಮಾಡಿ ಸ್ಥಳದಲ್ಲೇ ಪರಿಹಾರ ದೊರಕಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ತರನ್ಮುಂ ಬೆಂಗಾಲಿ,ಮಹೇಶ ಕುಳಲ್ಲಿ, ಕಾರ್ಮಿಕ ನಿರೀಕ್ಷಕ ಪಾಂಡುರಂಗ ಮಾವರಕರ ಸೇರಿದಂತೆ ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.