ಗೋಕಾಕ:ಮೌಲ್ಯಯುತ ಮಹಾಕಾವ್ಯ ನೀಡಿ ಸಮಾಜಕ್ಕೆ ಮಾದರಿಯಾಗಿರುವ ವಾಲ್ಮೀಕಿ ಜೀವನ ನಮಗೆಲ್ಲ ದಾರಿದೀಪ : ಪ್ರೋ ಯು.ಎನ್. ಕುಂಟೋಜಿ
ಮೌಲ್ಯಯುತ ಮಹಾಕಾವ್ಯ ನೀಡಿ ಸಮಾಜಕ್ಕೆ ಮಾದರಿಯಾಗಿರುವ ವಾಲ್ಮೀಕಿ ಜೀವನ ನಮಗೆಲ್ಲ ದಾರಿದೀಪ : ಪ್ರೋ ಯು.ಎನ್. ಕುಂಟೋಜಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 26 :
ದರೋಡೆ, ಕಳ್ಳತನದ ಮೂಲಕ ಜೀವನ ಸಾಗಿಸುತ್ತಿದ್ದ ಮಹರ್ಷಿ ವಾಲ್ಮೀಕಿ ಬದಲಾವಣೆಯಾಗಿ ಮಾನವ ಕುಲಕ್ಕೆ ಮೌಲ್ಯಯುತ ಮಹಾಕಾವ್ಯವೊಂದನ್ನು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.ಇಂದು ಅವರ ಜೀವನ ನಮಗೆಲ್ಲ ದಾರಿದೀಪವಾಗಿದೆ ಎಂದು ವಿಜಯಪುರದ ಸಿಕ್ಯಾಬ್ ಮಹಿಳಾ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ ಉಮರಶರೀಫ್ ಕುಂಟೋಜಿ ಹೇಳಿದರು.
ರವಿವಾರದಂದು ನಗರದ ಉಪ ಕಾರಾಗೃಹದಲ್ಲಿ ಉಪಕಾರಾಗೃಹ ಗೋಕಾಕ ಮತ್ತು ಚಾವಡಿ ಓದುಗರ ಬಳಗ, ವಿಜಯಪುರ ಇವರ ಸಹಯೋಗದಲ್ಲಿ ವಿಚಾರಣಾಧೀನ ಬಂಧಿಗಳ ಮನ ಪರಿವರ್ತನೆ ನಿಮಿತ್ಯ ” ಪರಿವರ್ತನೆಯೇ ಜಗದ ನಿಯಮ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಪ್ಪು ಮಾಡುವದು ಸಹಜ ಆದರೆ ಮನುಷ್ಯರಾದ ನಾವು ಅದನ್ನು ಸುಧಾರಿಸಿಕೊಂಡು ಜೀವನದಲ್ಲಿ ಸಾಧಿಸಿ ತೋರಿಸಿ ಉತ್ತಮ ಪ್ರಜೆಯಾಗಿ ಬಾಳಿ ಬದುಕಬೇಕಾಗಿದೆ.ದೈಹಿಕವಾಗಿ, ಮಾನಸಿಕವಾಗಿ ಪರಿವರ್ತನೆ ಆಗುವದು ಸಹಜ. ಇದು ಜಗದ ನಿಯಮ. ಅಂತೆಯೇ ಶ್ರೀಕೃಷ್ಣ ಭಗವದ್ಗಿತೆಯಲ್ಲಿ ನಿನ್ನದಲ್ಲದ ತಪ್ಪಿಗೆ ಕೊರಗಬೇಡ ಎಂದು ಹೇಳಿದ್ದಾನೆ. ಹಲವಾರು ವ್ಯಕ್ತಿಗಳು ತಮ್ಮ ಜೀವನದಲ್ಲಿ ತಪ್ಪು ಮಾಡಿದರು ಸಹ ನಂತರ ಅದನ್ನು ಸುಧಾರಿಸಿಕೊಂಡು ಮನಕುಲಕ್ಕೆ ಮಾದರಿಯಾಗಿ ಜೀವನ ಸಾಗಿಸಿ ಮಹಾನ ಚೇತನಗಳಾಗಿದ್ದಾರೆ. ಅಂತಹ ಮಹಾಪುರುಷರನ್ನು ಮಾದರಿಯಾಗಿಟ್ಟುಕೊಂಡು ಸನ್ಮಾರ್ಗದಲ್ಲಿ ನಾವು ಜೀವನ ಸಾಗಿಸಬೇಕಾಗಿದೆ. ಅರಿಯದೇ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಎಲ್ಲರೂ ಜೀವನದಲ್ಲಿ ಸಂತೋಷದಿಂದ ಇರಲು ಬಯಸುತ್ತಾರೆ ಆದರೆ ಜೀವನದಲ್ಲಿ ನಡೆದ ಆಕಸ್ಮಿಕ ಘಟನೆ ಮತ್ತು ಗಳಿಗೆಗೆ ಸಿಲುಕಿ ಬಂಧಿಯಾಗಿರುತ್ತಾರೆ. ಅದನ್ನು ಮರತು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯಪುರದ ಚಾವಡಿ ಓದುಗರ ಬಳಗ ಮತ್ತು ಮಹಾಬೆಳಗು ಸಂಸ್ಥೆ ವತಿಯಿಂದ ಉಪ ಕಾರಾಗೃಹದ ಅಧೀಕ್ಷಕ ಅಂಬರೀಷ್ ಪೂಜಾರಿ ಅವರಿಗೆ “ಸಾಹಿತ್ಯ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ವಿಜಯಪುರದ ಸಾಹಿತಿ ಮನು ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಕಾರಾಗೃಹದ ಅಧೀಕ್ಷಕ ಅಂಬರೀಷ್ ಪೂಜಾರಿ ವಹಿಸಿದ್ದರು. ಕಾರ್ಯಕ್ರಮವನ್ನು ಗಣ್ಯ ವ್ಯಾಪಾರಸ್ಥ ಮಹಾಂತೇಶ ತಾಂವಶಿ ಉದ್ಘಾಟಿಸಿದರು.ಕಾರ್ಯಕ್ರಮವನ್ನು ಕಾರಾಗೃಹದ ಮುಖ್ಯ ವೀಕ್ಷಕ ಶಕೀಲ ಜಕಾತಿ ನಿರೂಪಿಸಿದರು.
ವೇದಿಕೆಯಲ್ಲಿ ವಿಜಯಪುರದ ಎಕ್ಸಲೆಂಟ್ ವಿಜ್ಞಾನ ಪದವಿಪೂರ್ವ ಕಾಲೇಜನ ಉಪನ್ಯಾಸಕ ರಾಜೇಂದ್ರಕುಮಾರ ಬಿರಾದಾರ, ಪ್ರೊ ಚಂದ್ರಶೇಖರ್ ಅಕ್ಕಿ, ಸಭಾಸ ಯಾದವಾಡ, ಬಸವರಾಜ ಕುಂಬಾರ, ಶರಣಗೌಡ ಪಾಟೀಲ, ದಾಕ್ಷಾಯಿಣಿ ಬಿರಾದಾರ, ಬಿ.ಆರ್.ಬನಸೋಡೆ, ಶ್ರೀಮತಿ ವಿದ್ಯಾ ರೆಡ್ಡಿ, ಮಿರಾಸೆ ಉಪಸ್ಥಿತರಿದ್ದರು.