ಗೋಕಾಕ:ಸ್ಪರ್ಧಾತ್ಮಕ ನೆಲೆಗಟ್ಟಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ : ಸಿ.ಎಂ.ಜೋಶಿ
ಸ್ಪರ್ಧಾತ್ಮಕ ನೆಲೆಗಟ್ಟಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ : ಸಿ.ಎಂ.ಜೋಶಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 4 :
ಕಕ್ಷೀಗಾರರ ನಿರೀಕ್ಷೆಯಂತೆ ವಸ್ತು-ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ನ್ಯಾಯವಾದಿಯ ಮೇಲಿದೆ ಎಂದು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಸಂಜೆ ಇಲ್ಲಿನ ವಕೀಲರ ಸಂಘವು ನ್ಯಾಯಾಲಯ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ‘ವಕೀಲರ ಮತ್ತು ಕಾನೂನು ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರಂತರ ಅಧ್ಯಯನದ ಮೂಲಕವೇ ಸ್ಪರ್ಧಾತ್ಮಕ ನೆಲೆಗಟ್ಟಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ನ್ಯಾಯವಾದಿಗಳು ವೃತ್ತಿ ನೈಪುಣ್ಯತೆಯನ್ನು ಮೈಗೂಡಿಸಿಕೊಂಡು ನ್ಯಾಯದಾನ ವ್ಯವಸ್ಥೆಯ ಭಾಗವಾಗಿರುವ ಲೋಕ ಅದಾಲತ್‍ಗಳ ಯಶಸ್ಸಿನಲ್ಲೂ ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಮಾತನಾಡಿ, ಇದೇ ದಿ. 18ರಂದು ಜರುಗಲು ನಿಗದಿಯಾಗಿರುವ ಬೃಹತ್ ಲೋಕ ಅದಾಲತ್ತಿನ ಯಶಸ್ಸು ವಕೀಲರ ಪಾಲ್ಗೊಳ್ಳುವಿಕೆಯನ್ನು ಅವಲಂಭಿಸಿದ್ದು ಎಲ್ಲ ಸದಸ್ಯರೂ ಸೃಜನಾತ್ಮಕವಾಗಿ ಪಾಲ್ಗೊಳ್ಳಿ ಎಂದು ಹೇಳಿದರು.
ವಕೀಲರ ದಿನಾಚರಣೆ ನಿಮಿತ್ಯ ಸಂಘದ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅತಿಥಿ ಮಹೋದಯರು ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಪ್ರೋತ್ಸಾಹಿಸಿದರು.
ವೇದಿಕೆಯಲ್ಲಿ ನ್ಯಾಯಾಧೀಶರುಗಳಾದ ದೀಪಾ ಜಿ., ಶಂಕರ ಕೆ.ಎಂ., ಪ್ರಿಯಾಂಕಾ ಟಿ.ಕೆ. ಮತ್ತು ಶೋಭಾ ಹಾಗೂ ಪರಿಷತ್ ಸದಸ್ಯ ಕೆ.ಬಿ.ನಾಯಿಕ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ವಿನಯ ಮಾಂಗಳೇಕರ , ಹಿರಿಯ ವಕೀಲರ ಕಮೀಟಿ ಚೇರಮನ್ ಬಿ.ಆರ್.ಕೊಪ್ಪ ಉಪಸ್ಥಿತರಿದ್ದರು.