ಗೋಕಾಕ:ಡಿಸೆಂಬರ್ 15 ರ ನಂತರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ : ಅಶೋಕ ಪೂಜಾರಿ ಸ್ವಷ್ಟನೆ
ಡಿಸೆಂಬರ್ 15 ರ ನಂತರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ : ಅಶೋಕ ಪೂಜಾರಿ ಸ್ವಷ್ಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 7 :
ಬರುವ ಡಿಸೆಂಬರ್ 15 ರಿಂದ 20 ರ ಒಳಗೆ ತಮ್ಮೆಲ್ಲ ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಅಶೋಕ ಪೂಜಾರಿ ಹೇಳಿದರು.
ಮಂಗಳವಾರದಂದು ನಗರದ ಜ್ಞಾನ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ , ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದು, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನನ್ನ ಹಿತೈಷಿಗಳ , ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಾಗುವದು. ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಜೊತೆಗೂಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದು, ಡಿಸೆಂಬರ್ 10 ರಂದು ಜರಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲಿಸಿಬೇಕೆಂದು ಮನವಿ ಮಾಡಿದರು.
ಇದೆ ದಿನಾಂಕ 10 ರಂದು ಜರಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮಮದಾಪೂರ ಗ್ರಾಮದ ಬೂತದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಬೂತ ಏಜೆಂಟಾಗಿ ಕಾರ್ಯನಿರ್ವಹಿಸಿ ಕೊಟ್ಟಿ ಮತದಾನ ನಡೆಯದಂತೆ ನಿಗಾ ವಹಿಸಲಾಗುವದು. ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ನಾಯಕರು ಬೂತ ಮಟ್ಟದ ಏಜೆಂಟರಾಗಿ ಕಾರ್ಯ ನಿರ್ವಹಿಸುವ ನಿರ್ಧಾರ ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷದ ಮನವಿಯ ಮೇರೆಗೆ ಜಿಲ್ಲೆಯಾದ್ಯಂತ ಚುನಾವಣಾ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಮತದಾರರು ಯಾವುದಕ್ಕೂ ಹೆದರದೆ ತಮ್ಮ ಹಕ್ಕನ್ನು ತಾವೇ ಚಲಾಯಿಸಿ ಗೋಕಾಕಿನ ವ್ಯವಸ್ಥೆಯನ್ನು ಬದಲಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.
2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದೇ ಹೋದರೆ ತಮ್ಮ ನಿಲುವು ಏನು ಎಂದು ಕೇಳಲಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.