ಗೋಕಾಕ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿರುವ ದೇಶದ್ರೋಹಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿರುವ ದೇಶದ್ರೋಹಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 18 :
ನಾಡ ದ್ರೋಹಿ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಿ , ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿರುವ ದೇಶದ್ರೋಹಿಗಳನ್ನು ಗೂಂಡಾ ಕಾಯ್ದೆಡಿ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಶನಿವಾರದಂದು ಸಾಯಂಕಾಲ ಇಲ್ಲಿನ ಹಾಲುಮತ ಮಹಾಸಭಾ ಸಂಘಟನೆಯ ಸದಸ್ಯರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿಸಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಸ್ವಾತಂತ್ರ್ಯ ಹೋರಾಟಗಾರ , ಹುತಾತ್ಮ , ಕನ್ನಡಿಗರ ಸ್ವಾಭಿಮಾನದ ಸಂಕೇತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಭಗ್ನಗೊಳಿಸಿರುವ ನಾಡದ್ರೋಹಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು. ಕರ್ನಾಟಕ ಸರಕಾರವು ಮರಾಠ ಅಭಿವೃದ್ಧಿ ನಿಗಮದ ವತಿಯಿಂದ ಮೀಸಲಾತಿ ಸೌಲಭ್ಯಗಳನ್ನು ಬಳಸಿಕೊಂಡು ಕನ್ನಡ ನಾಡಿಗೆ ದ್ರೋಹ ಮಾಡುತ್ತಿರುವ ಎಂಇಎಸ್ ಕಿಡಿಗೇಡಿಗಳ ಕೃತ್ಯಗಳಿಂದಾಗಿ ಕನ್ನಡಿಗರ ಮತ್ತು ಮರಾಠ ಭಾಷಿಕರ ನಡುವೆ ಜಗಳ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಕೂಡಲೇ ಶಿಕ್ಷಿಸಿ ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಮುಖಂಡರುಗಳಾದ ಮಡೆಪ್ಪ ತೋಳಿನವರ, ಸಿದ್ದಲಿಂಗ ದಳವಾಯಿ, ಲಕ್ಷ್ಮಣ ಮುಸಗುಪ್ಪಿ, ಪಂಡಿತಪ್ಪ ಕಂಬಳಿ, ಸಂತೋಷ ಕಟ್ಟಕರ, ಅನಿಲ ತುರಾಯಿದಾರ,ಆನಂದ ಉಳ್ಳೆಗಡ್ಡಿ, ಕರವೇ ಮುಖಂಡ ಕಿರಣ ಢಮಾಮಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .