ಮೂಡಲಗಿ:ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮೂಡಲಗಿ ತಾಲೂಕಿನ ಜನತೆಗೆ ಅನ್ಯಾಯವಾಗಿದೆ : ಸಂಸದ ಅಂಗಡಿ ಆರೋಪ
ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮೂಡಲಗಿ ತಾಲೂಕಿನ ಜನತೆಗೆ ಅನ್ಯಾಯವಾಗಿದೆ : ಸಂಸದ ಅಂಗಡಿ ಆರೋಪ
ಮೂಡಲಗಿ ಸೆ 22: ಬಿಜೆಪಿ ಸರಕಾರದಲ್ಲಿ ಘೋಷಣೆ ಆದ ಎಲ್ಲ ತಾಲೂಕುಗಳು ಕಾರ್ಯಗತ ಆಗಲು ಅದಿಸೂಚನೆಗೆ ಒಳಪಟ್ಟಿವೆ ಆದರೆ ಮೂಡಲಗಿ ತಾಲೂಕಾ ಒಂದನ್ನು ಕೈ ಬಿಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಮಾತ್ರ ಇದರಿಂದ ಮೂಡಲಗಿ ತಾಲೂಕಿನ ಜನತೆಗೆ ಅನ್ಯಾಯವಾಗಿದೆ ಎಂದ ಅವರು ಗೋಕಾಕದಲ್ಲಿ ಕಾಂಗ್ರೇಸ್ ಖಾಲಿ ಮಾಡುವವರೆಗೆ ಮೂಡಲಗಿ ಭಾಗದ ಜನತೆಗೆ ತೊಂದರೆ ತಪ್ಪುವದಿಲ್ಲ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಅವರು ಶುಕ್ರವಾರದಂದು ಸಂಜೆ ಮೂಡಲಗಿ ತಾಲೂಕಾ ಹೋರಾಟ ಸಮಿತಿಯ 15ನೇ ದಿನದ ಅನಿರ್ದಿಷ್ಟ ಸತ್ಯಾಗ್ರಹದ ವೇದಿಕೆಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಮೂಡಲಗಿ ತಾಲೂಕಾವನ್ನು ನಾನೆ ತಡೆಹಿಡಿದಿದ್ದೆನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ಸಮಯದಲ್ಲಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶೀಘ್ರವಾಗಿ ಮೂಡಲಗಿ ತಾಲೂಕನ್ನು ಮಂಜೂರ ಮಾಡಿಕೊಂಡು ಬರುವದಾಗಿ ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವದಾಗಿ ಅಲ್ಲಿಯವರಿಗೆ ಹೊರಾಟದ ವೇದಿಕೆಯನ್ನು ಹತ್ತುವದಿಲ್ಲ ಎಂದು ಹೇಳಿದ್ದಾರೆ. ಶಾಸಕರು ಮಾತು ಕೊಟ್ಟಂತೆ 10-15 ದಿನಗಳಲ್ಲಿ ತಾಲೂಕಾ ಮರು ಘೋಷಣೆಯ ಆದೇಶವನ್ನು ತರಲಿ ಎಂದು ಒತ್ತಾಯಿಸಿದರು. ಶಾಸಕರಿಗೆ ಜಿಲ್ಲೆಯ ಹತ್ತು ಬಿಜೆಪಿ ಶಾಸಕರ ಬೆಂಬಲವಿದೆ. ಶಾಸಕರು ಮಾತು ಕೊಟ್ಟಂತೆ ನಡೆದುಕೊಂಡರೆ ನಾನೆ ಅವರನ್ನು ಪ್ರಥಮವಾಗಿ ಸತ್ಕರಿಸಿ ಗೌರವಿಸುತ್ತೇನೆ ಎಂದರು.
ಮುಖ್ಯ ಮಂತ್ರಿಗಳು ಬೆಳಗಾವಿಗೆ ಬಂದಾಗ ನನಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಿಕೊಂಡು ಬರಲು ಆಹ್ವಾನಿಸಿದ ಸಂಧರ್ಭದಲ್ಲಿ ಮೂಡಲಗಿ ತಾಲೂಕು ಘೋಷಣೆ ಮಾಡದೆ ಇದ್ದಲ್ಲಿ ರಕ್ತಪಾತಕ್ಕೆ ದಾರಿಯಾದೀತು ಎಂದು ಮುಖ್ಯ ಮಂತ್ರಿಗಳಿಗೆ ಹೇಳಿದೆ ಎಂದರು. ಆರ್ಥಿಕ, ಶೈಕ್ಷಣಿಕ, ವ್ಯವಸಾಯ ಇನ್ನಿತರ ರಂಗಗಳಲ್ಲಿ ಮೂಡಲಗಿಯೂ ದಾಖಲೆ ನಿರ್ಮಿಸಿದೆ ಇಂತಹ ಪ್ರತಿಷ್ಠೆಯ ಕೇಂದ್ರ ಸ್ಥಳಕ್ಕೆ ಅನ್ಯಾಯವಾಗಲು ಬಿಡುವದಿಲ್ಲ ಎಂದು ಹೇಳಿ ಮೂಡಲಗಿ ತಾಲೂಕು ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಮಾಜಿ ಸಚಿವ ಉಮೇಶ ಕತ್ತಿ ಮಾತನಾಡಿ, ಬಿಜೆಪಿ ಸರಕಾರವು ಘೋಷಣೆ ಮಾಡಿದ ಮೂಡಲಗಿ ತಾಲೂಕನ್ನು ಕಾಂಗ್ರೇಸ ಸರಕಾರ ರದ್ದು ಪಡಿಸಿದ್ದು ದುರ್ದೈವದ ಸಂಗತಿಯಾಗಿದೆ. ಗೋಕಾಕ ತಾಲೂಕು ದೊಡ್ಡದಿದ್ದು ಆಡಳಿತಾತ್ಮಕವಾಗಿ ವಿಭಜನೆಯಾಗಿ ಮೂಡಲಗಿ ತಾಲೂಕಾ ಆಗಬೇಕಾಗಿದ್ದು ಅನಿವಾರ್ಯವಾಗಿದ್ದು, ತಾವು ಕಂದಾಯ ಸಚಿವರನ್ನು ಒತ್ತಾಯಿಸಿ ತಾಲೂಕನ್ನು ಮರು ಘೋಷಣೆ ಮಾಡುವದಾಗಿ ಭರವಸೆ ನೀಡಿದರು.
ಶೀಘ್ರವಾಗಿ ಮೂಡಲಗಿ ತಾಲೂಕಾ ಕೇಂದ್ರವೆಂದು ಮರು ಘೋಷಣೆ ಮಾಡದೆ ಇದ್ದಲ್ಲಿ ಮತ್ತೆ ಉತ್ತರ ಕರ್ನಾಟಕದ ಧ್ವಜ ಹಿಡಿಯಬೇಕಾಗುವದು ಎಂದು ಮುಖ್ಯ ಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.
ವಿಧಾನ ಪರಿಷತ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಕಾಂಗ್ರೇಸ್ ಸರಕಾರ ಮೂಡಲಗಿ ತಾಲೂಕ ರದ್ದು ಮಾಡಿದ್ದನ್ನು ಪುನಃ ಘೋಷಣೆ ಮಾಡಲು ಒತ್ತಾಯಿಸಿದ್ದರು. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಬೇಕೆಂದು ಹೇಳಿ ತಮ್ಮ ಬೆಂಬಲ ವ್ಯಕ್ತ ಪಡಿಸಿದರು. ಭೀಮಶಿ ಗಡಾದ, ಅಶೋಕ ಪೂಜೇರಿ, ಈರಣ್ಣಾ ಕಡಾಡಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಆರ್.ಸೋನವಾಲ್ಕರ, ಬಿ.ಬಿ.ಹಂದಿಗುಂದ, ಆರ್.ಪಿ.ಸೋನವಾಲ್ಕರ, ಡಿ.ಬಿ.ಪಾಟೀಲ, ಸತೀಶ ಒಂಟಗೋಡಿ, ಲಕ್ಕಣ್ಣಾ ಸವಸುದ್ದಿ, ಪ್ರಕಾಶ ಸೋನವಾಲ್ಕರ, ಮಲ್ಲಪ್ಪ ಮದಗುಣಕಿ, ಈರಣ್ಣಾ ಕೊಣ್ಣುರ ಮತ್ತಿತರರು ಇದ್ದರು