ಗೋಕಾಕ:ಗೋವಾ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸಲು ಆಗ್ರಹ: ಕರವೇಯಿಂದ ಮುಖ್ಯಮಂತ್ರಿಗಳಿಗೆ ಮನವಿ
ಗೋವಾ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸಲು ಆಗ್ರಹ: ಕರವೇಯಿಂದ ಮುಖ್ಯಮಂತ್ರಿಗಳಿಗೆ ಮನವಿ
ಗೋಕಾಕ ಸೆ 23: ಗೋವಾ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು.
ತಹಶೀಲ್ದಾರ ಕಛೇರಿ ಎದುರು ಸೇರಿದ ಕ.ರ.ವೇ. ಕಾರ್ಯಕರ್ತರು ಗೋವಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಷ ವ್ಯಕ್ತ ಪಡಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದ ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ಕಳೆದ ಹಲವಾರು ವರ್ಷಗಳಿಂದ ನೆರೆ ರಾಜ್ಯ ಗೋವಾದಲ್ಲಿ ಸಿಲುಕಿರುವ ಕನ್ನಡಗಿರನ್ನು ಗೋವಾ ಸರಕಾರ ಪ್ರವಾಸೋದ್ಯಮದ ಅಭಿವೃದ್ಧಿ ನೆಪವೊಡ್ಡಿ ಅಲ್ಲಿ ನೆಲೆಸಿರುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸುತ್ತಿರುವುದು ಖಂಡನೀಯ. ಈ ಕುರಿತು ಮುಂದಿನ ವಾರ ಗೋವಾ ಮುಖ್ಯಮಂತ್ರಿ ಮನೋಹರ ಪರೀಕರ ಬಳಿ ಕ.ರ.ವೇ. ನಿಯೋಗ ಕರೆದೋಯ್ದು ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಲು ಆಗ್ರಹಿಸಲಾಗುವುದು. ಸುಮಾರು 4-5 ದಶಕಗಳಿಂದ ಗೋವಾ ರಾಜ್ಯದಲ್ಲಿಯೇ ವಾಸಿಸಿ ಅಲ್ಲಿಯ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡಿರುವ ಕನ್ನಡಿಗರನ್ನು ಪುನರ್ ವಸತಿ ಕಲ್ಪಿಸದೇ ಯಾವುದೇ ಮುನ್ಸೂಚನೆ ನೀಡದೇ ಅವರ ಮನೆಗಳನ್ನು ತೆರವುಗೊಳಿಸುವ ಗೋವಾ ಸರಕಾರದ ಕ್ರಮ ತರವಲ್ಲ. ಈ ಕೂಡಲೇ ಕರ್ನಾಟಕ ಸರಕಾರ ಮಧ್ಯಸ್ಥಿಕೆ ವಹಿಸಿ ಗೋವಾ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರ ಹಿತ ಕಾಪಾಡುವ ನಿಟ್ಟಿನಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವರಿಗೆ ಪುನರ್‍ವಸತಿ ಕಲ್ಪಿಸಬೇಕೆಂದು ಮುಂದಾಗಬೇಕೆಂದು ಸಮಸ್ತ ಗೋವಾ ರಾಜ್ಯದ ಪರವಾಗಿ ಖಾನಪ್ಪನವರ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಹನೀಫಸಾಬ ಸನದಿ, ಶೆಟ್ಟೆಪ್ಪ ಗಾಡಿವಡ್ಡರ, ನೀಯಾಜ ಪಟೇಲ, ಕೆಂಪಣ್ಣ ಕಡಕೋಳ, ರಮೇಶ ಕಮತಿ, ಕೆಂಚಪ್ಪ ತಿಗಡಿ, ಶಾನೂರ ದೇಸಾಯಿ, ಸಂಜು ಗಾಡಿವಡ್ಡರ, ಬಸು ಗಾಡಿವಡ್ಡರ, ರವಿ ನಾವಿ, ಶಂಕರ ಹಾಲವ್ವಗೋಳ, ಮಲ್ಲಪ್ಪ ತಲೆಪ್ಪಗೋಳ, ರಾಮ ಕುಡ್ಡೆಮ್ಮಿ, ರಾಮ ಕುಂಗನೋಳಿ, ಹನಮಂತ ಕಮತಿ, ರಾಮ ಸಣ್ಣಲಗಮನ್ನವರ, ದುಂಡಪ್ಪ ನಿಂಗನ್ನವರ, ಬಸವರಾಜ ಮಕ್ಕಳಗೇರಿ, ಆನಂದ ಗಾಡಿವಡ್ಡರ, ಮಲ್ಲಪ್ಪ ಮಡಿವಾಳರ, ರಮೇಶ ಪಿಡಾಯಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.