ಬೆಳಗಾವಿ:ಬಿಜೆಪಿ ಅಧಿಕೃತ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ಬೇಡ : ಶಾಸಕ ಬಾಲಚಂದ್ರ ಜಾರಕಿಹೊಳಿ
ಬಿಜೆಪಿ ಅಧಿಕೃತ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ಬೇಡ : ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜ 23 :
ಬೆಳಗಾವಿಯಲ್ಲಿ ಶನಿವಾರ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರು ಸಭೆ ಸೇರಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಸಭೆಯಲ್ಲಿ ಯಾರನ್ನೂ ಹೊರಗಿಟ್ಟು ಸಭೆ ನಡೆಸಿದ್ದಾರೆ ಎಂಬುದನ್ನು ಕೂಡ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಈ ಬಗ್ಗೆ ಭಾನುವಾರದಂದು ಹೇಳಿಕೆ ನೀಡಿರುವ ಅವರು, ಉದ್ಧೇಶಪೂರ್ವಕವಾಗಿ ಯಾರನ್ನೂ ಹೊರಗಿಟ್ಟು ಸಭೆಯನ್ನು ನಡೆಸುವ ಅವಶ್ಯಕತೆ ಇರಲಿಲ್ಲ. ಅಲ್ಲದೇ ಇದು ಬಿಜೆಪಿಯ ಅಧಿಕೃತ ಸಭೆಯೂ ಅಲ್ಲ. ಹೀಗಾಗಿ ಈ ಸಭೆಗೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆಯೂ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಯಾರು? ಎಷ್ಟು? ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂಬುದು ಪಕ್ಷದ ವರಿಷ್ಠರಿಗೆ ಚೆನ್ನಾಗಿ ಗೊತ್ತಿದೆ. ದಿನಕ್ಕೊಬ್ಬರಂತೆ ಸಭೆ ನಡೆಸುತ್ತ ಹೋದರೆ ಅದಕ್ಕೆಲ್ಲ ಉತ್ತರ ನೀಡುವ ಗೋಜಿಗೆ ಹೋಗುವುದಿಲ್ಲ. 2008 ರಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಬಲವರ್ಧನೆಗೊಳಿಸಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ. ಈಗ ನಡೆಯುತ್ತಿರುವ ಎಲ್ಲ ವಿದ್ಯಮಾನಗಳನ್ನು ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ನಡೆಸಿರುವ ಸಭೆಯ ಕುರಿತಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿಕೆಯನ್ನು ನೀಡಿದ್ದಾರೆ.