RNI NO. KARKAN/2006/27779|Tuesday, March 11, 2025
You are here: Home » breaking news » ಮೂಡಲಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನ ಮೂಡಲಗಿಗೆ ಬಂತು ಸಬ್ ರಜಿಸ್ಟ್ರಾರ್ ಕಛೇರಿ

ಮೂಡಲಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನ ಮೂಡಲಗಿಗೆ ಬಂತು ಸಬ್ ರಜಿಸ್ಟ್ರಾರ್ ಕಛೇರಿ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನ
ಮೂಡಲಗಿಗೆ ಬಂತು ಸಬ್ ರಜಿಸ್ಟ್ರಾರ್ ಕಛೇರಿ

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಫೆ 2 :

 

ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಅಸ್ಥೆ, ಕಾಳಜಿಯಿಂದ ಮೂಡಲಗಿ ತಾಲೂಕಿಗೆ ಹೊಸ ಉಪ ನೋಂದಣಿ ಕಛೇರಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಈ ಮೂಲಕ ಶೀಘ್ರದಲ್ಲಿಯೇ ಮೂಡಲಗಿ ತಾಲೂಕಿನಲ್ಲಿ ಉಪ ನೋಂದಣಿ ಕಛೇರಿ ಆರಂಭಗೊಳ್ಳಲಿದೆ.
ಹೊಸದಾಗಿ ಈ ಉಪ ನೋಂದಣಿ ಕಛೇರಿಯನ್ನು ಆರಂಭವಾಗಿರುವುದರಿಂದ ಮೂಡಲಗಿ, ಅರಭಾವಿ ಸೇರಿದಂತೆ ಸುತ್ತಮುತ್ತಲಿನ ಹೋಬಳಿ ಮತ್ತು ಗ್ರಾಮಗಳಲ್ಲಿರುವ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಈ ಮೊದಲು ಗೋಕಾಕ ತಾಲೂಕು ವ್ಯಾಪ್ತಿಗೆ ಇದು ಒಳಪಟ್ಟಿದ್ದರಿಂದ ಸಾರ್ವಜನಿಕರು ಆಸ್ತಿ ನೋಂದಣಿಗಾಗಿ ಗೋಕಾಕಕ್ಕೆ ಅಲೆದಾಡಬೇಕಿತ್ತು. ಮೂಡಲಗಿಯಲ್ಲಿಯೇ ಉಪ ನೋಂದಣಿ ಕಛೇರಿ ಆರಂಭಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಗೋಕಾಕ ನಗರಕ್ಕೆ ಅಲೆದಾಡುವುದು ತಪ್ಪಲಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದಾಗಿ ಮೂಡಲಗಿಯನ್ನು ರಾಜ್ಯ ಸರ್ಕಾರ ತಾಲೂಕಾಗಿ ಘೋಷಣೆ ಮಾಡಿತ್ತು. ಇದಾದ ಬಳಿಕ ತಾಲೂಕಿಗೆ ಒಂದೊಂದೇ ಕಛೇರಿಗಳನ್ನು ಮೂಡಲಗಿಗೆ ತರುವಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಇದರ ಫಲವಾಗಿ ಈಗ ಉಪ ನೋಂದಣಿ ಕಛೇರಿ ಪೂರ್ಣ ಪ್ರಮಾಣದಲ್ಲಿ ಮೂಡಲಗಿ ತಾಲೂಕಿನ ಜನತೆಗೆ ಲಭ್ಯವಾಗಿದೆ. ರಾಜ್ಯ ಸರ್ಕಾರದ ಆದೇಶ ಸಂಖ್ಯೆ:ಕಂಇ/210/ಎಂಎನ್‍ಎಸ್‍ಎ/2020, ದಿನಾಂಕ:01-02-2022 ರ ಪ್ರಕಾರ ಉಪ ನೋಂದಣಾಧಿಕಾರಿ, ದ್ವಿತೀಯ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್, ಗ್ರುಫ್ ಡಿ ತಲಾ ಒಂದೊಂದು ಹುದ್ದೆಯನ್ನು ಕೂಡಾ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬಹು ದಿನಗಳ ಬೇಡಿಕೆ : ಮೂಡಲಗಿ ತಾಲೂಕು ಕೇಂದ್ರವಾಗುವ ಮೊದಲು ಗೋಕಾಕ ತಾಲೂಕಿಗೆ ಒಳಪಟ್ಟಿತ್ತು. ನಂತರ ಮೂಡಲಗಿ ತಾಲೂಕು ಮಾನ್ಯತೆ ಪಡೆದ ನಂತರ ಇಲ್ಲಿಯೇ ಉಪ ನೋಂದಣಿ ಕಛೇರಿಯನ್ನು ಆರಂಭಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮೇಲೆ ತಾಲೂಕಿನ ಜನತೆ ಕೂಡ ಮನವಿ ಮಾಡಿಕೊಂಡಿತ್ತು. ವಿಶೇಷವೆಂದರೆ ಗೋಕಾಕ ಉಪ ನೋಂದಣಿ ಕಛೇರಿಯ ಆದಾಯದ ದೃಷ್ಟಿಯಿಂದ ಮೂಡಲಗಿ ತಾಲೂಕಿನಲ್ಲಿಯೇ ಆದಾಯವು ಹೆಚ್ಚಿತ್ತು. ಈ ಎಲ್ಲ ವಿಚಾರಗಳನ್ನು ಮನಗಂಡ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಆಸಕ್ತಿವಹಿಸಿ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿದ ಪರಿಣಾಮವಾಗಿ ಈಗ ಮೂಡಲಗಿಯಲ್ಲಿಯೇ ತಾಲೂಕು ಉಪ ನೋಂದಣಿ ಕಛೇರಿಯನ್ನು ಮಂಜೂರು ಮಾಡಿದೆ. ಈಗಾಗಲೇ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಜನೇವರಿ 24, 2022 ರಂದು ಮೂಡಲಗಿಯಲ್ಲಿ ಉಪ ನೋಂದಣಿ ಕಛೇರಿಯನ್ನು ಆರಂಭಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದ ಮೂಡಲಗಿ ತಾಲೂಕಿನ ಸುತ್ತಮುತ್ತಲಿನ ಜನತೆಯಲ್ಲಿ ತೀವ್ರ ಸಂತಸಕ್ಕೆ ಕಾರಣವಾಗಿದೆ.
ಮೂಡಲಗಿ ತಾಲೂಕು ಕೇಂದ್ರವಾದ ನಂತರ ಉಪ ನೋಂದಣಿ ಕಛೇರಿ ಆರಂಭಿಸುವಂತೆ ಜನರು ತಮ್ಮ ಬಳಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಉಪ ನೋಂದಣಿ ಕಛೇರಿ ಆಗಲು ಇರುವ ಅರ್ಹತೆ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಉಪ ನೋಂದಣಿ ಕಛೇರಿಯನ್ನು ಮೂಡಲಗಿಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಬಹು ದಿನಗಳ ಬೇಡಿಕೆಯಾಗಿದ್ದ ಉಪ ನೋಂದಣಿ ಕಛೇರಿ ಈಗ ಮೂಡಲಗಿಗೆ ದೊರೆತಿರುವುದಿರಿಂದ ಜನತೆಗೆ ತುಂಬ ಅನುಕೂಲವಾಗಲಿದೆ. ಜನರ ಸಮಯ, ಹಣ ಕೂಡ ಉಳಿತಾಯವಾಗಲಿದ್ದು, ಸುತ್ತಾಟ ಕೂಡ ಕಡಿಮೆಯಾಗಲಿದೆ. ಮೂಡಲಗಿಗೆ ಉಪ ನೋಂದಣಿ ಕಛೇರಿಗೆ ಮಂಜೂರಾತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಬಾಲಚಂದ್ರ ಜಾರಕಿಹೊಳಿ, ಶಾಸಕರು, ಅರಭಾವಿ

Related posts: