ಬೆಂಗಳೂರು:ಮಾಜಿ ಸಚಿವ ರಮೇಶ.ಜಾರಕಿಹೊಳಿಗೆ ಬೀಗ್ ರಿಲೀಫ್ : ಕ್ಲೀನ್ ಚೀಟ್ ನೀಡಿದ ಎಸ್.ಐ.ಟಿ
ಮಾಜಿ ಸಚಿವ ರಮೇಶ.ಜಾರಕಿಹೊಳಿಗೆ ಬೀಗ್ ರಿಲೀಫ್ : ಕ್ಲೀನ್ ಚೀಟ್ ನೀಡಿದ ಎಸ್.ಐ.ಟಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಂಗಳೂರು ಫೆ 4 :
ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೆ ವಿಶೇಷ ತನಿಖಾದಳ ಕ್ಲೀನ್ ಚಿಟ್ ನೀಡಿದೆ. ನಿನ್ನೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಎಸ್‌ಐಟಿ ಯಿಂದ ತನಿಖಾವರದಿ ಸಲ್ಲಿಕೆ ಮಾಡಲಾಗಿದೆ.
ಸಾಕ್ಷಾಧಾರ ಕೊರತೆ ಹಿನ್ನಲೆ ಬಿ ರಿಪೋರ್ಟ್ (B Report) ಸಲ್ಲಿಕೆ ಮಾಡಲಾಗಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯುವತಿ ಆರೋಪಿಸಿದ್ದರು. ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಜಿಪಿ ಸೋಮೆಂದು ಮುಖರ್ಜಿ ನೇತೃತ್ವದಲ್ಲಿ ಎಸ್‌ಐಟಿ ಯಿಂದ ನಡೆದ ತನಿಖೆ ನಡೆಸಲಾಗಿತ್ತು. ತನಿಖೆ ಪೂರ್ಣಗೊಂಡಿದ್ದು, ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಯುವತಿ ಕೊಟ್ಟ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಲಾಗಿದೆ.
ಎಸ್‌ಐಟಿ ಒಟ್ಟು 150 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಹಲವು ವಿಚಾರಗಳನ್ನು ತಿಳಿಸಿದೆ. ಕಳೆದ ವರ್ಷ ಸಿಡಿ ಬಹಿರಂಗಗೊಂಡ ಹಿನ್ನೆಲೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
SIT ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಏನಿದೆ?
ಇಬ್ಬರ ನಡುವೆ ಒಮ್ಮತದಿಂದ ಲೈಂಗಿಕ ಕ್ರಿಯೆ ನಡೆದಿದೆ. ಯುವತಿ ಮತ್ತು ರಮೇಶ್ ಜಾರಕಿಹೊಳಿ ಮಾತನಾಡಿರುವ ಆಡಿಯೋಯದಲ್ಲಿ ಸಹಜವಾಗಿ ಮಾತಾಡಿರೋದು ಕಂಡು ಬಂದಿದೆ. ಬಿಡುಗಡೆಗೊಂಡ ವಿಡಿಯೋ ಎಡಿಟ್ ಮಾಡಲಾಗಿದೆ. ಇನ್ನೂ ಪ್ರಕರಣದಲ್ಲಿ ಕೇಳಿ ಬಂದಿರುವ ಆರೋಪಿಗಳು ಬ್ಲ್ಯಾಕ್ ಆಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿರೋದು ತನಿಖೆಯಲ್ಲಿ ತಿಳಿದು ಬಂದಿದೆ.
ಇನ್ನು ಯುವತಿ ಉದ್ಯೋಗ ನೀಡುವ ಆಮಿಷವೊಡ್ಡಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಿಕೆ ದಾಖಲಿಸಿದ್ದು, ಈ ಸಂಬಂಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ.
ಮತ್ತೆ ಸಚಿವ ಸ್ಥಾನ ಸಿಗುತ್ತಾ?
ವಿಡಿಯೋ ಬಿಡುಗಡೆ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಪುಟ ವಿಸ್ತರಣೆಯ ಮಾತುಗಳು ಕೇಳಿ ಬಂದಿವೆ. ಸದ್ಯ ಗೋವಾದಲ್ಲಿರುವ ರಮೇಶ್ ಜಾರಕಿಹೊಳಿ ಸೋಮವಾರ ಬೆಂಗಳೂರಿಗೆ ಬಂದು ದೆಹಲಿಗೆ ತೆರಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಒಂದು ವೇಳೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆದಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಕ್ಯಾಬಿನೆಟ್ ಸೇರ್ಪಡೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಎಸ್‌ಐಟಿ ಕ್ಲೀನ್ ಚಿಟ್ ನೀಡಿರುವ ವರದಿ ಹಿಡಿದು ರಮೇಶ್ ಜಾರಕಿಹೊಳಿ ಸಂಪುಟ ಸೇರಿಕೊಳ್ಳಬಹುದು.
ಗೋವಾದಲ್ಲಿ ಫಡ್ನವೀಸ್ ಭೇಟಿಯಾದ ರಮೇಶ್ ಜಾರಕಿಹೊಳಿ
ಗೋವಾದ ಖಾಸಗಿ ಹೋಟೆಲ್ ನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಬೆಂಬಲಿಗರನ್ನು ದೂರ ಇಟ್ಟು ರಹಸ್ಯವಾಗಿ ಮಾತುಕತೆ ನಡೆಸಿದರು. ಸಂಪುಟ ವಿಸ್ತರಣೆ ಹಿನ್ನೆಲೆ ಪ್ರಮುಖವಾಗಿ ತಮಗೆ ಸಚಿವ ಸ್ಥಾನ ಸಿಗಲು ಮಾಜಿ ಸಿಎಂ ಫಡ್ನವಿಸ್ ಮೂಲಕ ಹೈಕಮಾಂಡ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.
ಬದ್ಧ ವೈರಿಗಳಿಗೆ ಗುದ್ದು ನೀಡಲು ಸಾಹುಕಾರ್ ಸರ್ಕಸ್
ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ಬಣ ರಾಜಕೀಯ ಜೋರಾಗಿ ನಡೆದಿದ್ದು ರಾಜಕೀಯ ಬದ್ಧ ವೈರಿಗಳೆ ಗುದ್ದು ನೀಡಲು ಸಜ್ಜಾಗಿದ್ದಾರೆ. ಮೊನ್ನೆಯಷ್ಟೆ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಸಹೋದರರ ವಿರುದ್ಧ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಅಂತಾ ಆರೋಪಿಸಿ ಸಚಿವ ಉಮೇಶ್ ಕತ್ತಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಿಎಂ ಗೆ ದೂರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಈ ರಾಜಕೀಯ ವೈರಿಗಳಿಗೆ ಟಾಂಗ್ ನೀಡಲು ಸಾಹುಕಾರ್ ರಣತಂತ್ರ ರೂಪಿಸಿದ್ದಾರೆ. ಫಡ್ನವಿಸ್ ಗೆ ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆ ಗಮನಕ್ಕೆ ತಂದು ಹೈಕಮಾಂಡ್ ಗೆ ಜಾರಕಿಹೊಳಿ ಸಹೋದರ ಇಮೇಜ್ ಗೆ ಧಕ್ಕೆ ಬಾರದಂತೆ ರಾಜ್ಯ ರಾಜಕೀಯ ವಾಸ್ತವದ ಸ್ಥತಿ ಹೇಳಿ, ಪಕ್ಷದಲ್ಲಿರುವ ತಮ್ಮ ವಿರೋಧಿಗಳ ಬಗ್ಗೆ ದೂರು ನೀಡಿದ್ದಾರೆ ಎಂದು ಎನ್ನಲಾಗಿದೆ.
ಇನ್ನು ಇದಕ್ಕೆ ಮಾಜಿ ಸಿಎಂ ಫಡ್ನವಿಸ್ ಕೂಡ ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಮೇಶ್ ಜಾರಕಿಹೊಳಿ ಕೂಡ ಮತ್ತೆ ಒಂದು ಸುತ್ತಿ ದೆಹಲಿ ಪ್ರಯಾಣ ಬೆಳೆಸಲಿದ್ದಾರೆ ಅಂತಾ ಹೇಳಲಾಗುತ್ತಿದೆ.