RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿಯೊಬ್ಬ ಕನ್ನಡಿಗ ಶ್ರಮಿಸಬೇಕು : ಪ್ರಿಯಾಂಕಾ ಜಾರಕಿಹೊಳಿ

ಗೋಕಾಕ:ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿಯೊಬ್ಬ ಕನ್ನಡಿಗ ಶ್ರಮಿಸಬೇಕು : ಪ್ರಿಯಾಂಕಾ ಜಾರಕಿಹೊಳಿ 

ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿಯೊಬ್ಬ ಕನ್ನಡಿಗ ಶ್ರಮಿಸಬೇಕು : ಪ್ರಿಯಾಂಕಾ ಜಾರಕಿಹೊಳಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 27 :

 
ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿಯೊಬ್ಬ ಕನ್ನಡಿಗ ಶ್ರಮಿಸಿದಾಗ ಕನ್ನಡ ಪರ ಸಂಘಟನೆಗಳು ಶಕ್ತಿಯುತವಾಗಿ ಹೊರಹೊಮ್ಮಲು ಸಾಧ್ಯ ಎಂದು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಭಾನುವಾರ ಕೆ.ಎಲ್.ಇ. ಸಂಸ್ಥೆಯ ಇಲ್ಲಿನ ಮಹಾದೇವಪ್ಪ ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಸಂಕೀರ್ಣದಲ್ಲಿ ಆಯೋಜಿತ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಮತ್ತು ಸಾಹಿತ್ಯದ ಶ್ರೇಯೋಭಿವೃದ್ಧಿಗೆ ಅಧಿಕಾರದಲ್ಲಿರುವ ಸರ್ಕಾರಗಳ ಅವಶ್ಯಕತೆ ಇದ್ದು ಆ ದೆಶೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳೂ ಕೂಡ ತಮ್ಮ ಸಹಾಯ ಹಸ್ತವನ್ನು ಚಾಚಬೇಕು ಎಂದು ಮನವಿ ಮಾಡಿಕೊಂಡರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾಂವಶಿ ಅವರು ನೂತನ ಅಧ್ಯಕ್ಷೆ ಭಾರತಿ ಮದಭಾವಿ ಅವರಿಗೆ ಕಸಾಪ ಧ್ವಜ ಹಸ್ತಾಂತರಿಸುವ ಮೂಲಕ ಕಾರ್ಯಕಾರಿ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಭಾರತಿ ಮದಭಾವಿ ಅವರು, ಕನ್ನಡ ಭಾಷೆ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಬೇಕೆಂಬ ಇತ್ಯಾದಿ ಕನಸುಗಳನ್ನು ಹೊತ್ತು ಈ ಹೊಸ ಜವಾಬ್ದಾರಿಗೆ ಹೆಗಲು ನೀಡಿದ್ದಾಗಿ ಅಂತರಾಳದ ಮಾತುಗಳನ್ನು ವೇದಿಕೆ ಮೂಲಕ ಬಿಚ್ಚಿಟ್ಟರು.
ಟಿವಿಗಳ ಮೂಲಕ ಮೂಡಿಬರುವ ಬಹುತೇಕ ಸುದ್ದಿ ಸಾರಗಳು ವ್ಯಾಕರಣ ರಹಿತವಾಗಿದ್ದು ಮತ್ತು ಪದೆ-ಪದೇ ಹೇಳಿದ್ದನ್ನೇ ಹೇಳುವ ಮೂಲಕ ಕನ್ನಡ ಭಾಷಿಕರ ಮನಸ್ಸನ್ನು ನೋಯಿಸುತ್ತಿವೆ. ಇದಕ್ಕಾಗಿ ಮೊಟ್ಟ ಮೊದಲು ಟಿವಿ ಓದುಗರಿಗಾಗಿ ವ್ಯಾಕರಣ ಕ್ಲಾಸ್‍ಗಳನ್ನು ನಡೆಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ನಿರ್ದೇಶಕ ಜಯಾನಂದ ಮುನವಳ್ಳಿ ಅವರು ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕøತಿಯ ಶ್ರೇಯಸ್ಸನ್ನು ಉತ್ತುಂಗಕ್ಕೊಯ್ಯಲು ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲು ತಾವು ಸದಾ ಸಿದ್ಧ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಸಿದ್ಲಿಂಗಪ್ಪ ದಳವಾಯಿ, ವಿಶ್ವನಾಥ ಕಡಕೋಳ ಮತ್ತಿತರರು ಇದ್ದರು.
ಪ್ರೊ. ಮಹಾನಂದಾ ಪಾಟೀಲ ಸ್ವಾಗತಿಸಿದರು. ಪ್ರೊ. ಶಿವಲೀಲಾ ಪಾಟೀಲ ನಿರೂಪಿಸಿದರು. ಜಾನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ ವಂದಿಸಿದರು.

Related posts: