ಮೂಡಲಗಿ :ಮೂಡಲಗಿ ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ಕಂದಾಯ ಸಚಿವರ ಸಮ್ಮತಿ : ಬಾಲಚಂದ್ರ ಜಾರಕಿಹೊಳಿ ಮಾಹಿತಿ
ಮೂಡಲಗಿ ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ಕಂದಾಯ ಸಚಿವರ ಸಮ್ಮತಿ : ಬಾಲಚಂದ್ರ ಜಾರಕಿಹೊಳಿ ಮಾಹಿತಿ
ಮೂಡಲಗಿ ಸೆ 27 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಮೂಡಲಗಿ ತಾಲೂಕಿನ ಪ್ರಸ್ತಾವನೆಯನ್ನು ಶೀಘ್ರ ಸಂಪುಟ ಸಭೆಗೆ ಹಾಜರುಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪನವರು ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣದ ಹೊಸ ಪ್ರಸ್ತಾವನೆಯು ನಮ್ಮ ಕಂದಾಯ ಇಲಾಖೆಗೆ ಬಂದಿದ್ದು ಶೀಘ್ರ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಪ್ಪಿಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲ. ಮೂಡಲಗಿಯನ್ನು ಹೊಸ ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ತಮ್ಮ ಸಮ್ಮತಿ ವ್ಯಕ್ತಪಡಿಸಿದರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ವಿಧಾನಸೌಧದ 3ನೇ ಮಹಡಿಯಲ್ಲಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಕಛೇರಿಗೆ ಬುಧವಾರ ಸಂಜೆ 4.30 ರ ಸುಮಾರಿಗೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ತಾಲೂಕು ರಚನೆಯ ಪ್ರಸ್ತಾವನೆಯ ಬಗ್ಗೆ ಸಚಿವರ ಗಮನಕ್ಕೆ ತಂದರು. ಮೂಡಲಗಿಯು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ದೊಡ್ಡ ಪಟ್ಟಣವಾಗಿದ್ದು, ತಾಲೂಕು ಸ್ಥಳವಾಗಲು ಎಲ್ಲ ಅರ್ಹತೆ ಪಡೆದುಕೊಂಡಿದೆ. ತಾಲೂಕಿಗೆ ಬೇಕಾದ ಬಹುತೇಕ ಸರ್ಕಾರಿ ಕಛೇರಿಗಳನ್ನು ಹೊಂದಿದೆ. ಈಗಾಗಲೇ ಮೂಡಲಗಿಯಲ್ಲಿ ತಾಲೂಕು ಕೇಂದ್ರದ ಸ್ಥಾನಮಾನಕ್ಕೆ ಆಗ್ರಹಿಸಿ ನಾಗರೀಕರು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ನಾಗರೀಕರ ಹಿತದೃಷ್ಟಿಯಿಂದ ಮೂಡಲಗಿಯನ್ನು ತಾಲೂಕಾ ಸ್ಥಳವನ್ನಾಗಿ ಸರ್ಕಾರ ಶೀಘ್ರ ಘೋಷಿಸಬೇಕು. ಆದಷ್ಟು ಬೇಗ ಸಚಿವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದರು.
ಸರ್ಕಾರ ಇತ್ತೀಚೆಗೆ ಹೊಸ ತಾಲೂಕುಗಳ ರಚನೆಯಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವುದಕ್ಕೆ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ಮೂಡಲಗಿ ನಾಗರೀಕರಿಗೆ ಭರವಸೆ ನೀಡಿದಂತೆ ನಾನು ಬೆಂಗಳೂರಿನಲ್ಲಿ ಬೀಡಾರ ಹೂಡಿದ್ದು ಮೂಡಲಗಿ ತಾಲೂಕು ರಚನೆಯನ್ನು ಮಾಡಿಕೊಂಡೇ ಸ್ವ-ಕ್ಷೇತ್ರಕ್ಕೆ ಮರುಳುತ್ತೇನೆ. ಸಂಪುಟ ಸಭೆಯಲ್ಲಿ ಇದನ್ನು ಅನುಮೋದಿಸುವವರೆಗೂ ಬೆಂಗಳೂರಿನಲ್ಲಿಯೇ ಇರುತ್ತೇನೆ. ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರದ ಆದೇಶ ಪತ್ರವನ್ನು ತಂದೇ ತರುತ್ತೇನೆ. ಇದರಲ್ಲಿ ಎರಡು ಮಾತಿಲ್ಲವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪುನರುಚ್ಛರಿಸಿದ್ದಾರೆ.
ಮೂಡಲಗಿಯನ್ನು ತಾಲೂಕಾ ಸ್ಥಳವನ್ನಾಗಿ ಘೋಷಿಸುವಂತೆ ಶತಾಯಗತಾಯವಾಗಿ ಪ್ರಯತ್ನಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದ್ದನ್ನು ಸ್ಮರಿಸಬಹುದು.