ಗೋಕಾಕ:ಹಿಂದುಳಿದ ವರ್ಗಗಳ ವಕೀಲರು ಸಂಘಟಿತರಾಗಿ: ಸುರೇಶ್ ಎಂ. ಲಾತೂರ
ಹಿಂದುಳಿದ ವರ್ಗಗಳ ವಕೀಲರು ಸಂಘಟಿತರಾಗಿ: ಸುರೇಶ್ ಎಂ. ಲಾತೂರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 3 :
ಹಿಂದುಳಿದ ವರ್ಗಗಳ ವಕೀಲರು ಸಂಘಟಿತರಾಗಿ ಹಿಂದುಳಿದ ವರ್ಗಗಳ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘದ ಅಧ್ಯಕ್ಷ ಸುರೇಶ್ ಎಂ. ಲಾತೂರ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 52ರಷ್ಟು ಮಂದಿ ಹಿಂದುಳಿದ ವರ್ಗಗಳ ಜನರು ಇದ್ದೇವೆ. ಆದರೆ, ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ರಾಜಕೀಯ, ಶೈಕ್ಷಣಿಕ , ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದೇವೆ
ನಮಗೆ ಸಿಗಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ. ಮುಂದುವರೆದ ವರ್ಗಗಳು ಅಧಿಕಾರವನ್ನು ಹೊಂದಿ ಸೌಲಭ್ಯಗಳನ್ನು ಪಡೆಯುತ್ತಿವೆ ಎಸ್.ಸಿ. ,ಎಸ್.ಟಿ ಜನಾಂಗದವರು ಮೀಸಲಾತಿಯಿಂದ ಸೌಲಭ್ಯಗಳನ್ನು ಹೊಂದುತ್ತಿದ್ದಾರೆ. ಈ ನಡುವಿನ ಹಿಂದುಳಿದ ವರ್ಗಗಳಿಗೆ ಸರಕಾರದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಮಾಜಿ ಪ್ರಧಾನಿ ದಿವಂಗತ ಯು.ಪಿ.ಸಿಂಗ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಪರವಾಗಿ ಹೋರಾಟ ನಡೆಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹಿಂದುಳಿದ ವರ್ಗಗಳ ಪರವಾಗಿ ಧ್ವನಿ ಎತ್ತುತ್ತಿದ್ದರು ಅವರಿಗೆ ಅಧಿಕಾರ ದೊರೆಯುತ್ತಿಲ್ಲ. ಇದನ್ನು ಅರಿತು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ್ದವರಲ್ಲಿ ಹೆಚ್ಚಿನ ಜನ ವಕೀಲರೆ ಆಗಿದ್ದರು. ಅವರಂತೆ ತಾವು ಜಾಗೃತರಾಗಿ ಹೋರಾಟ ಮಾಡುವ ಮೂಲಕ ಸೌಲಭ್ಯಗಳನ್ನು ಪಡೆಯಲು ಈ ಸಂಘವನ್ನು ಪ್ರಾರಂಭಿಸಲಾಗಿದೆ. ಇದಕ್ಕೆ ಎಲ್ಲರೂ ಸದಸ್ಯರಾಗುವ ಮೂಲಕ ಸಂಘಟನೆಯನ್ನು ಬಲಪಡಿಸುವಂತೆ ವಿನಂತಿದರು.
ಹಿಂದುಳಿದ ವರ್ಗಗಳ ಸಾಮಾಜಿಕ ಪಾಲನ್ನು ಮೇಲ್ವರ್ಗಗಳು ಪಡೆಯುತ್ತಿವೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲಾತಿ ಸಿಗದ ರೀತಿಯಲ್ಲಿ ಮಾಡುತ್ತಿದ್ದಾರೆ. ವಕೀಲರ ನೇತೃತ್ವದಲ್ಲಿ ಈ ವರ್ಗಗಳ ಜನರನ್ನು ಮುನ್ನಡೆಸಿದರೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಹೇಳಿದರು.
ಹಿಂದುಳಿದ ವರ್ಗಗಳ ವಕೀಲರ ಸಂಘ ಈಗ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 10ರಂದು ಸಂಜೆ 4ಕ್ಕೆ ಸಂಘವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸುವರು. ಸಚಿವರಾದ ಕೋಟ ಶ್ರೀನಿವಾಸಪೂಜಾರಿ, ಆನಂದ್ ಸಿಂಗ್ ಇತರರು ಪಾಲ್ಗೊಳ್ಳುವರು ಎಂದರು.
ರಾಜ್ಯದಲ್ಲಿ ಒಬಿಸಿ ವಕೀಲರನ್ನು ಒಗ್ಗೂಡಿಸುತ್ತೇವೆ. ಸಂಘವು ಯಾವುದೇ ಜಾತಿ ವಿರುದ್ಧವಲ್ಲ. ರಾಜಕೀಯ ಸಂಘಟನೆಯೂ ಅಲ್ಲ. ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಷ್ಟೇ ಉದ್ದೇಶ. ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಸಹ ರಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳಾದ ಪ್ರಶಾಂತ್ ಎ.ಎಚ್. ಎಂ. ವೆಂಕಟೇಶ್ ಗೌಡ,ಶ್ರೀಮತಿ ಮಾಲತಿ, ನಗರದ ವಕೀಲರಾದ ವಿ.ಆರ್.ಚಂದರಗಿ, ಎಸ್ ಎಂ.ಹತ್ತಿಕಟ್ಟಗಿ, ಎಲ್.ಟಿ.ತಪಶಿ, ವಿಷ್ಣು ಲಾತೂರ ಹಾಗೂ ಅರಬಾಂವಿ ಮತ್ತು ಗೋಕಾಕ ತಾಲೂಕಿನ ವಕೀಲರು ಹಾಜರಿದ್ದರು.