ಬೈಲಹೊಂಗಲ:ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ
ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ
ನಮ್ಮ ಬೆಳಗಾವಿ ಇ – ವಾರ್ತೆ, ಬೈಲಹೊಂಗಲ ಜು 13 :
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ ನಡೆದಿದೆ. ಆದರೆ ಅದೃಷ್ಪವಶಾತ್ ಶಿವರಂಜನ್ ಅವರಿಗೆ ಯಾವುದೇ ರೀತಿ ಪ್ರಾಣಾಪಾಯದ ತೊಂದರೆ ಆಗದೇ ದುಷ್ಕರ್ಮಿಯಿಂದ ಪಾರಾಗಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಬೈಲಹೊಂಗಲದ ಹನುಮಂತ ದೇವಸ್ಥಾನ ಬಳಿಯ ಅವರ ಮನೆಯ ಹತ್ತಿರ ಈ ಘಟನೆ ನಡೆದಿದ್ದಿ, ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಳಗಾವಿ SP ಡಾ. ಸಂಜೀವ ಪಾಟೀಲ್, ಎಎಸ್‍ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಹೋದರನಿಂದಲೇ ಶಿವರಂಜನ್ ಮೇಲೆ ಗುಂಡಿನ ದಾಳಿ: ಸದ್ಯ ಘಟನಾ ಸ್ಥಳಕ್ಕೆ ಬೆಳಗಾವಿ ಎಸ್‍ಪಿ ಡಾ. ಸಂಜೀವ ಪಾಟೀಲ್, ಎಎಸ್‍ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬಂಧನಕ್ಕೆ ವಿಶೇಷ ತನಿಖಾ ತಂಡ ರಚನೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ರಾತ್ರಿ 7.30ರ ಆಸುಪಾಸಿನಲ್ಲಿ ನಡೆದ ಈ ಘಟನೆಯಲ್ಲಿ ಅದೃಷ್ಟವಶಾತ್ ನಟ ಶಿವರಂಜನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್‌ನಲ್ಲಿ ಬಂದ ಆರೋಪಿ ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ. ಆದರೆ ಗುರಿ ತಪ್ಪಿದ್ದರಿಂದ ಶಿವರಂಜನ್ ಅವರು ಪಾರಾಗಿದ್ದಾರೆ ಎನ್ನಲಾಗಿದೆ.
ಇದಲ್ಲದೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಟ ಶಿವರಂಜನ್, ‘ತನ್ನ ಮೇಲೆ ಐದು ಸುತ್ತಿನ ಗುಂಡಿನ ದಾಳಿ ನಡೆದಿದೆ. ಆದರೆ ನಾನು ಪ್ರಾಣಾಯಾಯದಿಂದ ಪಾರಾಗಿದ್ದೇನೆ. ಗುರುಹಿರಿಯರ ಆಶಿರ್ವಾದದಿಂದ ಏನಾಗಿಲ್ಲ. ಇಂಥ ಘಟನೆ ಎಂದಿಗೂ ಆಗಬಾರದು. ಇದು ಖಂಡನಿಯ. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಓರ್ವನನ್ನು ಬಂಧಿಸಿದ್ದಾರೆ. ಇನ್ನೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಇದರ ನಡುವೆ ನಟ ಶಿವರಂಜನ್ ಸಹೋದರ ಮತ್ತು ಸಂಬಂಧಿಯಿಂದಲೇ ಈ ಗುಂಡಿನ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಮಾಹಿತಿ ಬಿಡುಗಡೆ: ಇನ್ನು, ನಟ ಶಿವರಂಜನ್ ಬೋಳಣ್ಣನವರರ ಮೇಲೆ ಕಳೆದ ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ಮಾಡಿದ್ದು. ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಇನ್ನು, ಈಗಾಗಲೇ ಓರ್ವ ಆರೋಪಿ ಬಂಧಿಸಲಾಗಿದೆ ಎಂದು ನಟ ಶಿವರಂಜನ್ ಬೋಳಣ್ಣನವರ್ ಅವರು ಬಿಡುಗಡೆ ಮಾಡಿರುವ ವಿಡಿಯೋ ಮೂಲಕ ತಿಳಿಸಿದ್ದಾರೆ.
ಚಲನಚಿತ್ರಗಳಲ್ಲಿ ನಟಿಸಿದ್ದ ನಟ ಶಿವರಂಜನ್:
ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ಕೆಲ ವರ್ಷಗಳ ಕಾಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವರಂಜನ್ ಅವರು, ಅಮೃತಸಿಂಧು, ರಾಜಾರಾಣಿ, ಆಟ ಹುಡುಗಾಟ, ಕನಸೆಂಬೋ ಕುದುರೆಯನೇರಿ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಶಿವರಂಜನ್ ನಾಯಕರಾಗಿ ಅಭಿನಯಿಸಿದ್ದಾರೆ. ಆದರೆ ಇವರ ಅಭಿನಯದ ಅಮೃತಸಿಂಧು ಚಿತ್ರವು ಇವರಿಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತ್ತು. 20 ವರ್ಷಗಳ ಹಿಂದೆ ಅಮೃತಸಿಂಧು ಚಿತ್ರವನ್ನು ಶಿವರಂಜನ್ ಅವರ ತಂದೆಯೇ ನಿರ್ಮಿಸಿದ್ದರು.