ಗೋಕಾಕ:ಕಲಾವಿದರನ್ನು ಜನತೆಗೆ ಪರಿಚಯಿಸುವ ಕಾರ್ಯ ಸಾಹಿತಿಗಳು ಮಾಡಬೇಕು : ಡಾ.ಸಂಗಮನಾಥ ಲೋಕಾಪೂರ
ಕಲಾವಿದರನ್ನು ಜನತೆಗೆ ಪರಿಚಯಿಸುವ ಕಾರ್ಯ ಸಾಹಿತಿಗಳು ಮಾಡಬೇಕು : ಡಾ.ಸಂಗಮನಾಥ ಲೋಕಾಪೂರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 17 :
ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಲಾವಿದರನ್ನು ಜನತೆಗೆ ಪರಿಚಯಿಸುವ ಕಾರ್ಯವನ್ನು ಸಾಹಿತಿಗಳು ಮಾಡಬೇಕೆಂದು ಕೆ.ಎ ಆರ್ ಸಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಸಂಗಮನಾಥ್ ಲೋಕಾಪೂರ ಹೇಳಿದರು.
ರವಿವಾರದಂದು ನಗರದ ಶಂಕರಲಿಂಗ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಭೂಮಿ ಬಳಗ ಮಹಿಳಾ ಜಾನಪದ ಸಂಘಟನೆ ಹಾಗೂ ಜಾಗೃತಿ ಮಹಿಳಾ ಸಮಾಜ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಡಾ.ಸಿ.ಕೆ ನಾವಲಗಿ ಅವರ ಬಯಲಾಟ ಮತ್ತು ಬಯಲಾಟ ಕಲಾವಿದರು ಪುಸ್ತಕಗಳ ಬಿಡುಗಡೆ ಮತ್ತು ಜಾನಪದ ಸಂಭ್ರಮ ಸಮಾರಂಭದಲ್ಲಿ ಬಯಲಾಟ ಕಲಾವಿದರು ಕೃತಿ ಕುರಿತು ಅವರು ಮಾತನಾಡಿದರು
ಕಲಾವಿದರ ಮೇಲೆ ಗೌರವವಿಟ್ಟು ಅವರ ನೈಜ ಚಿತ್ರಣವನ್ನು ತಮ್ಮ ಪುಸ್ತಕದಲ್ಲಿ ನಾವಲಗಿ ಅವರು ಚಿತ್ರಿಸಿದ್ದಾರೆ. 41 ಜನ ಬಯಲಾಟದ ಕಲಾವಿದರ ವ್ಯಕ್ತಿ ಚಿತ್ರಣ ಈ ಪುಸ್ತಕದಲ್ಲಿ ಇದ್ದು , ಅವರ ಸುಧೀರ್ಘ ಅಧ್ಯಯನ ಹಾಗೂ ಅವರ ಸಂದರ್ಶನದೊಂದಿಗೆ ವಾಸ್ತವಿಕತೆಯನ್ನು ಓದುಗರ ಮುಂದಿಟ್ಟಿದ್ದಾರೆ. ಕೌಜಲಗಿ ನಿಂಗಮ್ಮ, ಬಡಕುಂದ್ರಿ ಬಸಪ್ಪ , ಕುಲಕೋಡ ತಮ್ಮಣ, ಯಲ್ಲಪ ಪೂಜೇರಿ ಸೇರಿದಂತೆ ಅನೇಕ ಕಲಾವಿದರ ಬದುಕನ್ನು ಈ ಪುಸ್ತಕಗಳಲ್ಲಿ ಓದುಗರ ಮನ ಮುಟ್ಟುವಂತೆ ನಾವಲಗಿ ಅವರು ಬರೆದಿದ್ದಾರೆ.
ಜಾನಪದ ವಿಧ್ವಾಂಸ ನಾವಲಗಿ ಅವರು 75 ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದು, ಇನ್ನೂ ಹೆಚ್ಚಿನ ಕೃತಿಗಳು ಇವರಿಂದ ಬರೆಲೆಂದು ಆಶಿಸಿದರು.
ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರ ಬಯಲಾಟ ಪುಸ್ತಕ ಕುರಿತು ಮಾತನಾಡಿದರು.
ಭೂಮಿ ಬಳಗದ ಅಧ್ಯಕ್ಷೆ ಡಾ. ಶಶಿಕಲಾ ಕಾಮೋಶಿ ಪುಸ್ತಕಗಳನ್ನು ಬಿಡುಗಡೆಗೋಳಿಸಿದರು.
ವೇದಿಕೆಯ ಮೇಲೆ ಕಸಾಪ ಅಧ್ಯಕ್ಷೆ ಭಾರತಿ ಮದಬಾವಿ,ಜಾಗೃತಿ ಮಹಿಳಾ ಸಮಾಜ ಅಧ್ಯಕ್ಷೆ ಶಶಿಕಲಾ ಕೌತನಾಳಿ, ಲೇಖಕ ಡಾ.ಸಿ.ಕೆ ನಾವಲಗಿ, ಈಶ್ವರ ಚಂದ್ರ ಬೆಟಗೇರಿ, ಜಯಾನಂದ ಮಾದರ ಇದ್ದರು.
ವಿನೂತಾ ನಾವಲಗಿ ಸ್ವಾಗತಿಸಿದರು, ಜ್ಯೋತಿ ದೊಡ್ಡನವರ ಮತ್ತು ಗಿರಿಜಾ ದೊಡಮನಿ ನಿರೂಪಿಸಿದರು. ರಾಜೇಶ್ವರಿ ಆಲತಗಿ ವಂದಿಸಿದರು.