ಗೋಕಾಕ:ಬಳೋಬಾಳ ಗ್ರಾಮಕ್ಕೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಆಗ್ರಹಿಸಿ ಕರವೇ ಪ್ರತಿಭಟನೆ
ಬಳೋಬಾಳ ಗ್ರಾಮಕ್ಕೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಆಗ್ರಹಿಸಿ ಕರವೇ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 18 :
ತಾಲೂಕಿನ ಬಳೋಬಾಳ ಗ್ರಾಮಕ್ಕೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಆಗ್ರಹಿಸಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ಬಳೋಬಾಳ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಗುರುವಾರದಂದು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸೇರಿದಂತೆ ಕರವೇ ಕಾರ್ಯಕರ್ತರು ಪಂಚಾಯತ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ತಾಪಂ ಪ್ರಥಮ ದರ್ಜೆ ಸಹಾಯಕ
ಅಧಿಕಾರಿ ಸುರೇಶ್ ಅಥಣಿ ಅವರ ಮುಖಾಂತರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಅರ್ಪಿಸಿದರು.
ಕಳೆದ ಹಲವು ವರ್ಷಗಳಿಂದ ಬಳೋಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರದಿಂದ ಮಂಜೂರಾದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ಬಳೋಬಾಳ ಗ್ರಾಮ ಪಂಚಾಯತ್ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ.
ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಟದ ಮೈದಾನ, ಜೆ.ಜೆ.ಎಂ ಯೋಜನೆಯಡಿ ನಡೆದ ಕಾಮಗಾರಿಯಿಂದ ಗ್ರಾಮದ ಎಲ್ಲಾ ಓಣಿಗಳಲ್ಲಿ ರಸ್ತೆ ಹಾಳಾಗಿದ್ದು, ಸಾರ್ವಜನಿಕರು ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದ ಸಾರ್ವಜನಿಕ ಶೌಚಾಲಯಗಳು ಸಂಪೂರ್ಣ ಹಾಳಾಗಿವೆ. ಶೌಚ್ಚಕ್ಕೆ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಬಯಲು ಪ್ರದೇಶಗಳಲ್ಲಿ ಶೌಚ್ಚ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಹುಮುಖ್ಯವಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಳಪೆ ಕಾಮಗಾರಿಯಾಗಿ ಸಾಕಷ್ಟು ಅವ್ಯವಹಾರವಾಗಿದ್ದು, ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಇಂಜಿನಿಯರ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನೆರೆ ಸಂತ್ರಸ್ತರ ಪುರ್ನವಸತಿ ಯೋಜನೆಯಲ್ಲಿ ನೆರೆ ಸಂತ್ರಸ್ತರಿಗೆ ದೊರಕಬೇಕಾದ ಫಲಾನುಭವಿಗಳಿಗೆ ಸೂಕ್ತ ಸೌಲಭ್ಯಗಳು ದೊರೆತ್ತಿಲ್ಲ . ಗ್ರಾಮ ಲೆಕ್ಕಾಧಿಕಾರಿ ಹಾಗೂ ತಾಂತ್ರಿಕ ಅಭಿಯಂತರರು ಹಣ ಪಡೆದು ಸಿ ಇದ್ದ ಮನೆಗಳನ್ನು ಎ ಮತ್ತು ಬಿ ಶ್ರೇಣಿ ಮಾಡಿದ್ದಾರೆ. ಇದರಿಂದ ನೆರೆಯಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೀಗೆ ಒಂದಲ್ಲ ಎರೆಡಲ್ಲಾ ಹತ್ತು ಹಲವು ಅವ್ಯವಹಾರಗಳನ್ನು ಮಾಡಿ ಬಳೋಬಾಳ ಗ್ರಾಮಸ್ಥರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳಿಂದ ಬಳೋಬಾಳ ಗ್ರಾಮ ಪಂಚಾಯತ್ ಅಧಿಕಾರಿಗಳು ವಂಚಿತ ಮಾಡಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಬಳೋಬಾಳ ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ , ಬಸವರಾಜ ಹುಲಕುಂದ, ದೀಪಕ ಹಂಜಿ, ನಿಜಾಮ ನಧಾಪ, ಮಹಾದೇವ ಮಕ್ಕಳಗೇರಿ ,ಮಲ್ಲು ಸಂಪಗಾರ, ಬಸವರಾಜ ಗಾಡಿವಡ್ಡರ, ರಾಮ ಕುಡೆಮ್ಮಿ, ಹನೀಫ್ ಸನದಿ, ಮುಗುಟ ಪೈಲವಾನ, ಯಾಸೀನ್ ಮುಲ್ಲಾ, ಕಿರಣ ತೋಗರಿ, ಕಾಮೇಶ ಹಂಚಿನಮನಿ, ರಾಜು ಬಾಗೇವಾಡಿ, ಮುದಕಪ್ಪ ಹೊಸಮನಿ, ಶೆಟ್ಟೆಪ್ಪ ಡಬಾಜ, ಶಿವಲಿಂಗ ಮೆಗಡಿ, ಶಂಕರ ಮೆಗಡಿ, ರಪೀಕ ಬಾಗವಾನ, ಪರಶುರಾಮ ಕವಟಕೋಪ್ಪ, ಬಸವರಾಜ ಮುರಾರಿ, ಸಂತೋಷ ಹುಲಿಕಟ್ಟಿ, ಅಮರ ಬಾಗೇವಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು