ಬೆಳಗಾವಿ:ನೀವು ಹೇಳಿದಂತೆ ಹಿಡಿಯಲು ಅದು ನಾಯಿ ಮರಿಯಲ್ಲ, ಚಿರತೆ ಮರಿ : ಮೂರ್ನಾಲ್ಕು ದಿನಗಳಲ್ಲಿ ಹಿಡಿಯುತ್ತೆವೇ : ಸಚಿವ ಕತ್ತಿ
ನೀವು ಹೇಳಿದಂತೆ ಹಿಡಿಯಲು ಅದು ನಾಯಿ ಮರಿಯಲ್ಲ, ಚಿರತೆ ಮರಿ : ಮೂರ್ನಾಲ್ಕು ದಿನಗಳಲ್ಲಿ ಹಿಡಿಯುತ್ತೆವೇ : ಸಚಿವ ಕತ್ತಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಅ 22 :
ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆಗಳು ಪ್ರತ್ಯಕ್ಷವಾಗಿದ್ದು, ಜಿಲ್ಲೆಯಾದ್ಯಂತ ಜನರನ್ನು ಆತಂಕ್ಕೀಡು ಮಾಡಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿಗಳು 20 ದಿನಗಳಿಂದ ವಿಶೇಷ ಕಾರ್ಯಾಚರಣೆ ನಡೆಸಿದ್ದರೂ ಚಿರತೆ ಸೆರೆ ಹಿಡಿಯಲು ಸಾಧ್ಯವಾಗಿಲ್ಲ.
ಇದೀಗ ಆಪರೇಷನ್ ಚೀತಾ ಕಾರ್ಯಾಚರಣೆಗಾಗಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಿಂದ ನಾಳೆ ಎರಡು ಆನೆಗಳನ್ನು ತರಿಸಲಾಗುತ್ತಿದ್ದು, ಎರಡ್ಮೂರು ದಿನದಲ್ಲಿ ಚಿರತೆ ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಶಿವಮೊಗ್ಗ ಜಿಲ್ಲೆಯ ಸಕ್ರೈಬೈಲ್ ನಿಂದ ಎರಡು ಆನೆಗಳನ್ನು ಕರೆಸಲಾಗುತ್ತಿದೆ. 120 ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ 80 ಪೊಲೀಸ್ ಸಿಬ್ಬಂದಿಗಳನ್ನು ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ. ಕಳೆದ 20 ದಿನಗಳಿಂದ ಬೆಳಗಾವಿ ಜಿಲ್ಲೆಯ ನಾಲ್ಕು ಕಡೆ ಚಿರೆತೆಗಳು ಕಂಡು ಬಂದಿವೆ ಎಂದರು.
ಚಿರತೆ ಸೆರೆ ಹಿಡಿಯಲು ವಿಳಂಬಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀವು ಹೇಳಿದಂತೆ ಹಿಡಿಯಲು ಅದು ನಾಯಿ ಮರಿಯಲ್ಲ, ಚಿರತೆ ಮರಿ. ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಇನ್ನು ಎರಡ್ಮೂರು ದಿನಗಳಲ್ಲಿ ಚಿರತೆ ಸೆರೆ ಹಿಡಿಯಲಿದ್ದಾರೆ ಎಂದು ಗರಂ ಆದರು.
ಬೆಳಗಾವಿ ಗಾಲ್ಪ್ ನಲ್ಲಿ ಕಣ್ಮರೆಯಾಗಿದ್ದ ಚಿರತೆ ಸೋಮವಾರ ಬೆಳಗ್ಗೆ ಸ್ಥಳೀಯರಿಗೆ ಪ್ರತ್ಯಕ್ಷವಾಗಿ ಕಾಣಿಸಿಕೊಂಡಿದೆ. ಈ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ ಎಂದರು.