ಖಾನಾಪುರ:ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ
ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ
ಖಾನಾಪುರ ಅ 9: ಕೌಟುಂಬಿಕ ದೌರ್ಜನ್ಯ,ಅತ್ಯಾಚಾರ, ಎಳೆಮಕ್ಕಳ ಮೇಲೆ ಅತ್ಯಾಚಾರ ಮುಂತಾದ ಸಾಮಾಜಿಕ ಕುಕೃತ್ಯ ತಡೆಯಲು ಕಾನೂನುಗಳಿದ್ದರೂ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ.
ವೇಶ್ಯಾವಾಟಿಕೆಯಂಥ ಕರಾಳಕೂಪಕ್ಕೆ ಮಹಿಳೆಯರು ಬಲಿಯಾಗುತ್ತಿರುವುದು ಹಣಕ್ಕಾಗಿ ಹೆಣ್ಣಿನ ಮಾರಾಟ ಕಾನೂನು ಬಾಹಿರ ಮತ್ತು ಅಮಾನವೀಯ ಕೃತ್ಯಗಳು ಕಠಿಣ ಕಾನೂನು ಕೃಮಗಳಿಂದ ನಿಯಂತ್ರಿಸಲ್ಪಡಬೇಕು ಮತ್ತು ನಾರಿಯರಿಗೆ ಇಂಥ ಕಾನೂನುಗಳ ಸಂಪೂರ್ಣ ಅರಿವು ಇರಬೇಕು.ಸಂಘಸಂಸ್ಥೆಗಳು ತಜ್ಞರ ನೆರವು ಪಡೆದು ಕಾನೂನು ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಪ್ರಜ್ಞಾವಂತರನ್ನಾಗಿಸಬೇಕು ಎಂದು ಅನುಸೂಯಾ ಕಿಟದಾಳ ಹೇಳಿದರು.
ಇತ್ತೀಚೆಗೆ ಬೆಳಗಾವಿಯ ಸಾಹಿತ್ಯ ಭವನದಲ್ಲಿ ಲಿಂ.ವಿಶಾಲ ಹೆರೆಕರ ಅವರ ಸ್ಮರಣಾರ್ಥ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ನಡೆದ ದತ್ತಿನಿಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ದೀಪಿಕಾ ಚಾಟೆ ಅವರು ಮಹಿಳೆ ಮನೆ,ಆಫೀಸು ಎಲ್ಲೆಂದರಲ್ಲಿ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾಳೆ,ಮೋಸ ವಂಚನೆಗಳಿಗೆ ಬಲಿಯಾಗುತ್ತಿರುವುದನ್ನು ತಪ್ಪಿಸಲು ಅವಳಿಗೆ ಕಾನೂನಿನ ಅರಿವು ಮೂಡಿಸುವುದು ಅವಶ್ಯವಿದೆ ಹಾಗೂ ಮಹಿಳೆಯರ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದರು.ಮತ್ತು ವಿಶಾಲ ಹೆರೆಕರ ಚಿಕ್ಕ ವಯಸ್ಸಿನಲ್ಲಿಯೇ ತಾಯಿ ತಂದೆಗಳ ಎದುರಿನಲ್ಲಿ ವಿಧಿವಶರಾಗಿರುವುದನ್ನು ನೆನೆದು ದುಃಖ ವ್ಯಕ್ತಪಡಿಸಿದರು.
ದಾನಿಗಳಾದ ಸರಳಾ ಹೆರೆಕರ,ರತ್ನಪ್ರಭಾ ಬೆಲ್ಲದ,ಶಾರದಾ ಹರಕುಣಿ,ಸುನಂದಾ ಹಾಲಭಾವಿ,ಸುಮಾ ಕಿತ್ತೂರ,ವಾಸಂತಿ ಮೇಳೇದ,ಗೌರಿ ಕರ್ಕಿ,ಶಕುಂತಲಾ ಬಾಳೇಕುಂದ್ರಿ,ಶಾಲಿನಿ ಚಿನವಾರ,ನಂದಾ ಗಾರ್ಗಿ,ಸುಮಾ ಬೇವಿನಕೊಪ್ಪ ಮುಂತಾದವರು ದೇಶಭಕ್ತಿಗೀತೆಗಳನ್ನು ವಾಚನ ಮಾಡಿದರು.
ಸುನಂದಾ ಮುಳೆ ಪ್ರಾರ್ಥನೆ ಹೇಳಿದರು,ಜ್ಯೋತಿ ಬದಾಮಿ ಸ್ವಾಗತಿಸಿದರು,ಹೇಮಾ ಸೊನೊಳ್ಳಿ ನಿರೂಪಿಸಿದರು ಮತ್ತು ಹೇಮಾ ಭರಭರಿ ವಂದಿಸಿದರು.